Advertisement
ಅಫ್ಘಾನಿಸ್ಥಾನ ಟಿ20 ಜೋಶ್‌ಗೆ ಹೊಸತೊಂದು ಆಯಾಮ ನೀಡಿದ ತಂಡ. ಕಳೆದ ಟಿ20 ವಿಶ್ವಕಪ್‌ನಲ್ಲಿ ಐದರಲ್ಲಿ ಒಂದೂ ಪಂದ್ಯ ಗೆಲ್ಲದ ಅವಮಾನಕ್ಕೆ ತುತ್ತಾದ ತಂಡವೊಂದು ಎರಡೇ ವರ್ಷಗಳಲ್ಲಿ ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದು ಕ್ರಿಕೆಟಿನ ಅಚ್ಚರಿಗಳಲ್ಲೊಂದು.
ಅಫ್ಘಾನ್ ಬಹಳಷ್ಟು ಮಂದಿ ಹೀರೋಗಳನ್ನು ಒಳಗೊಂಡಿರುವ ಸಮತೋಲಿತ ತಂಡ. ಬ್ಯಾಟಿಂಗ್ ಆರಂಭಿಸುವ ರೆಹಮಾನುಲ್ಲ ಗುರ್ಬಜ್ 281 ರನ್, ಸ್ಟ್ರೈಕ್ ಬೌಲರ್ ಫಾರೂಖೀ 16 ವಿಕೆಟ್ ಸಂಪಾದಿಸಿದ್ದು, ಉತ್ತಮ ಲಯದಲ್ಲಿದ್ದಾರೆ. ನಾಯಕ ರಶೀದ್ ಖಾನ್, ಪೇಸರ್ ನವೀನ್ ಉಲ್ ಹಕ್, ಅನುಭವಿ ಮೊಹಮ್ಮದ್ ನಬಿ ಅವರೆಲ್ಲ ತಂಡದ ಯಶಸ್ಸಿನಲ್ಲಿ ಸಿಂಹಪಾಲು ಸಲ್ಲಿಸಿದ್ದಾರೆ. ಆದರೆ ನಾಕೌಟ್ ಎಂಬುದು “ಡಿಫರೆಂಟ್ ಬಾಲ್ ಗೇಮ್’. ಅಜೇಯ ದಕ್ಷಿಣ ಆಫ್ರಿಕಾ ಸವಾಲನ್ನು ಅಫ್ಘಾನಿ ಸ್ಥಾನ ಹೇಗೆ ಎದುರಿಸಲಿದೆ, ಹೇಗೆ ನಿಭಾ ಯಿಸಲಿದೆ ಎಂಬುದನ್ನು ಕಾಣಲು ಕ್ರಿಕೆಟ್ ಜಗತ್ತೇ ತುದಿಗಾಲಲ್ಲಿ ನಿಂತಿದೆ. ಈ ಸಂದರ್ಭದಲ್ಲಿ ಅಫ್ಘಾನ್ ತಂಡದ ಕೋಚ್ ಜೊನಾಥನ್ ಟ್ರಾಟ್ ಕೂಡ ಕಪ್ ಗೆಲ್ಲುವ ತಮ್ಮ ಉದ್ದೇಶವನ್ನು ಪರೋಕ್ಷವಾಗಿ ಹೇಳಿದ್ದಾರೆ. “ಯಾವುದೇ ಭಯವಿಲ್ಲದೆ ಅಥವಾ ಇತಿಹಾಸ ವಿಲ್ಲದೆ ನಾವು ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದ್ದೇವೆ. ಇದು ನಮಗೆ ಹೊಸ ಅನುಭವ. ಆದರೆ ಕೇವಲ ಸ್ಪರ್ಧಿಸುವ ಉದ್ದೇಶದಿಂದ ನಾವು ಸೆಮಿಫೈನಲ್‌ಗೆ ಹೋಗುತ್ತಿಲ್ಲ ಎಂಬುದಂತೂ ನಿಜ. ಇಲ್ಲಿ ಗೆಲ್ಲುವುದೇ ನಮ್ಮ ಗುರಿ. ನಾವು ಬಹಳಷ್ಟು ದೊಡ್ಡ ತಂಡಗಳನ್ನು ಮಣಿಸಿದ್ದೇವೆ’ ಎಂದಿದ್ದಾರೆ.
Related Articles
ದಕ್ಷಿಣ ಆಫ್ರಿಕಾ ಈ ಕೂಟದ ಕರಿಗುದುರೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತ ಬಂದಿದೆ. ಲೀಗ್‌ನಲ್ಲಿ ಎಲ್ಲ 4 ಪಂದ್ಯ, ಸೂಪರ್-8 ಹಂತದ ಮೂರೂ ಪಂದ್ಯ ಗೆದ್ದಿರುವ ಐಡನ್ ಮಾರ್ಕ್‌ರಮ್ ಪಡೆಯ ಈ ಅಜೇಯ ಓಟ ಮುಂದಿನೆರಡು ಪಂದ್ಯಗಳಿಗೂ ವಿಸ್ತರಿಸೀತೇ ಎಂಬುದೊಂದು ನಿರೀಕ್ಷೆ.
Advertisement
ಈವರೆಗೆ ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗದ ದಕ್ಷಿಣ ಆಫ್ರಿಕಾ, ಇಲ್ಲಿ ತನ್ನ ಬಹು ದೊಡ್ಡ ಕನಸೊಂದನ್ನು ಸಾಕಾರಗೊಳಿಸಲು ಹೊರಟಿದೆ. ಸಮರ್ಥ ಪಡೆಯನ್ನೂ ಹೊಂದಿದೆ. ಡಿ ಕಾಕ್, ಮಾರ್ಕ್ ರಮ್, ಕ್ಲಾಸೆನ್, ಸ್ಟಬ್ಸ್, ಮಿಲ್ಲರ್, ನೋರ್ಜೆ, ರಬಾಡ, ಶಮಿÕ ಅವರೆಲ್ಲ ಹೋರಾಟಕ್ಕೆ ಟೊಂಕ ಕಟ್ಟಿದ್ದಾರೆ.
ಆದರೆ ಇಂಥದೊಂದು ಶ್ರೇಷ್ಠ ಪ್ರದರ್ಶನ ನೀಡಿಯೂ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ, ಎಲ್ಲರೂ ಪಶ್ಚಾತ್ತಾಪಪಡುವಂತೆ ಕೂಟದಿಂದ ನಿರ್ಗಮಿಸುವ ಸಂಕಟ ದಕ್ಷಿಣ ಆಫ್ರಿಕಾದ್ದು. ಈ “ಚೋಕರ್’ ಹಣೆಪಟ್ಟಿಯಿಂದ ಮುಕ್ತವಾಗುವುದು ಹರಿಣಗಳ ಹೆಗ್ಗುರಿ.