Advertisement
ಯುದ್ಧಗ್ರಸ್ಥ ರಾಷ್ಟ್ರದಲ್ಲಿ ಶರಣಾಗತರಾದ ಅಫ್ಘಾನಿಸ್ಥಾನದ ಸೇನೆಯ 22 ಯೋಧರನ್ನು ಉಗ್ರರು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ತುರ್ಕ್‌ಮೇನಿಸ್ಥಾನಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದ ಪ್ರಾಂತ್ಯ ಫರ್ಯಾಬ್‌ನಲ್ಲಿ ಈ ಕೃತ್ಯವನ್ನು ಎಸಗಲಾಗಿದೆ. ಜೂ.16ರಂದೇ ಈ ದುರಂತ ನಡೆದಿದೆ. ಈ ಬಗ್ಗೆ ವೀಡಿಯೋ ಒಂದು ಮಂಗಳವಾರ ಬಿಡುಗಡೆಯಾಗಿದೆ.ಫರ್ಯಾಬ್‌ನಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಬಿರುಸಿನ ಗುಂಡಿನ ಕಾಳಗ ನಡೆಯಿತು. ಅಂತಿಮವಾಗಿ ಸೈನಿಕರ ಬಳಿ ಇದ್ದ ಗುಂಡುಗಳು ಬರಿದಾದವು. ಒಟ್ಟು 22 ಮಂದಿಯನ್ನು ತಾಲಿಬಾನ್ ಉಗ್ರರು ಸೆರೆಹಿಡಿದರು. ಅವರನ್ನು ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಊರ ಹೊರಗೆ ಎಸೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖೀಸಿ “ಸಿಎನ್‌ಎನ್’ ವರದಿ ಮಾಡಿದೆ.
ರೆಡ್‌ಕ್ರಾಸ್ ಕೂಡ ಮೃತದೇಹ ಯೋಧರದ್ದೇ ಎಂದು ಖಚಿತಪಡಿಸಿದೆ. ಆದರೆ ತಾಲಿಬಾನ್ ಸಂಘಟನೆ ವೀಡಿಯೋ ನಕಲಿ ಎಂದು ಹೇಳಿಕೊಂಡಿದೆ.
ನಗರಗಳಲ್ಲಿ ಕದನ ಬೇಡ: ನಗರಗಳ ಒಳಭಾಗದಲ್ಲಿ ಕದನ ಬೇಡ ಎಂದು ಉಗ್ರರು ಪ್ರತಿಪಾದಿಸಿದ್ದಾರೆ. ಅದಕ್ಕೆ ಪೂರಕವಾಗಿ ಟರ್ಕಿ ಸರಕಾರಕ್ಕೆ ಎಚ್ಚರಿಕೆ ನೀಡಿ, “ಅಫ್ಘಾನಿಸ್ಥಾನಕ್ಕೆ ನಿಮ್ಮ ಸೇನೆ ಕಳುಹಿಸಬೇಡಿ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಗುಡ್ಡ, ಪರ್ವತ, ಮರುಭೂಮಿಯಲ್ಲಿ ನಡೆಯು ತ್ತಿದ್ದ ಹೋರಾಟ ಮನೆಯ ಬಾಗಿಲಿಗೆ ಬಂದಿದೆ. ಇದೇ ವೇಳೆ, ಆ ದೇಶದಲ್ಲಿ ಉಗ್ರರ ಪ್ರಾಬಲ್ಯ ಹೆಚ್ಚುತ್ತಿದ್ದು ಯೋಧರು ಸಿಕ್ಕ ಸಿಕ್ಕಲ್ಲಿ ಪರಾರಿಯಾಗುತ್ತಿದ್ದಾರೆ.