ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿಯಾಗಿರುವ ಕಾಬೂಲ್‌ನಲ್ಲಿ ಉಗ್ರರು ಇಂದು ಸೋಮವಾರ ಬೆಳಗ್ಗೆ ಬಾಂಬ್ ಸ್ಫೋಟಿಸಿ ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 24 ಮಂದಿ ಮಡಿದು ಇತರ ಸುಮಾರು 42 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಈ ಆತ್ಮಾಹುತಿ ಬಾಂಬ್ ದಾಳಿಯನ್ನು ದೃಢೀಕರಿಸಿರುವ ಒಳಾಡಳಿತ ಸಚಿವಾಲಯದ ವಕ್ತಾರ ನಜೀಬ್ ದಾನಿಶ್, ಪಶ್ಚಿಮ ಕಾಬೂಲ್‌ನಲ್ಲಿ ಉಗ್ರರಿಂದ ಈ ದಾಳಿ ನಡೆದಿದ್ದು ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಹೇಳಿದ್ದಾರೆ.
ಸರಕಾರದ ಉಪ ಕಾರ್ಯಕಾರಿ ಮುಖ್ಯಸ್ಥ ಮೊಹಮ್ಮದ್ ಮೊಹಾಕಿಕ್ ಅವರ ನಿವಾಸದ ಬಳಿ ಈ ಆತ್ಮಾಹುತಿ ದಾಳಿ ನಡೆದಿದೆ. ಶಿಯಾ ಹಜಾರಾ ಸಮುದಾಯದವರ ಪ್ರಾಬಲ್ಯವಿರುವ ಪ್ರದೇಶವು ಇದಾಗಿದೆ ಎಂದು ವಕ್ತಾರ ಹೇಳಿದ್ದಾರೆ.
ಈ ಆತ್ಮಾಹುತಿ ಬಾಂಬ್ ದಾಳಿ ಎಸಗಿದ ಉಗ್ರ ಸಂಘಟನೆ ಯಾವುದು ಮತ್ತು ಅದರ ಉದ್ದೇಶವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ.
ಎರಡು ವಾರಗಳ ಹಿಂದೆ ನಾಲ್ವರನ್ನು ಬಲಿತೆಗೆದುಕೊಂಡ ಕಾಬೂಲ್‌ನಲ್ಲಿನ ಮಸೀದಿ ಮೇಲಿನ ಬಾಂಬ್ ದಾಳಿಯನ್ನು ತಾನು ಎಸಗಿರುವುದಾಗಿ ಇಸ್ಲಾಮಿಕ್ ಉಗ್ರ ಸಂಘಟನೆ ಹೇಳಿಕೊಂಡ ತರುವಾಯ ನಡೆದಿರುವ ಘಟನೆ ಇದಾಗಿದೆ.
2017ರಲ್ಲಿ ಈ ತನಕ ನಡೆದಿರುವ ಆತ್ಮಾಹುತಿ ಉಗ್ರ ದಾಳಿಗೆ ಶೇ.20 ಪೌರರು ಬಲಿಯಾಗಿದ್ದಾರೆ. ಕಳೆದ ಮೇ ತಿಂಗಳಾಂತ್ಯದಲ್ಲಿ ನಡೆದಿದ್ದ ಟ್ರಕ್ ಬಾಂಬ್ ದಾಳಿಗೆ 150 ಮಂದಿ ಬಲಿಯಾಗಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.