ಒಡಿಶಾ: ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷ 26/11 ದಾಳಿಯ ನಂತರ ಆಡಳಿತಾರೂಢ ಪಕ್ಷ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಮೇ 11) ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮುಂಗಡ ಹಣ ಪಡೆದು ವಾಪಸ್ ನೀಡದ ಆರೋಪ: ನಟ ಸಿಂಬು ವಿರುದ್ದ ಖ್ಯಾತ ನಿರ್ಮಾಪಕನಿಂದ ದೂರು
ಒಡಿಶಾದ ಕಂಧಮಾಲ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಪಕ್ಷದ ದುರ್ಬಲ ಮನಸ್ಥಿತಿಯಿಂದಾಗಿ ಜಮ್ಮು-ಕಾಶ್ಮೀರದ ಜನರು ದಶಕಗಳ ಕಾಲ ಪರಿತಪಿಸುವಂತಾಗಿತ್ತು ಎಂದು ದೂರಿದರು.
ದೇಶದಲ್ಲಿ ನಡೆದ ಉಗ್ರರ ಭಯಾನಕ ದಾಳಿಯ ಬಗ್ಗೆ ಜನರು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಖಂಡರು ಭಯೋತ್ಪಾದಕರ ಜತೆ ಕುಳಿತುಕೊಂಡು ಕುಮ್ಮಕ್ಕು ನೀಡುತ್ತಿದ್ದರು ಎಂದು ತಿರುಗೇಟು ನೀಡಿದರು.
ಭಾರತ ಪಾಕಿಸ್ತಾನವನ್ನು ಗೌರವಿಸಬೇಕು, ಯಾಕೆಂದರೆ ಅವರ ಬಳಿ ಅಣು ಬಾಂಬ್ ಇದೆ ಎಂಬ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಪಕ್ಷ ತಮ್ಮ ದೇಶದ ಜನರಲ್ಲಿಯೇ ಭಯವನ್ನು ಹುಟ್ಟುಹಾಕುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರು ಪಾಕಿಸ್ತಾನದ ಬಾಂಬ್ ಬಗ್ಗೆ ಮಾತನಾಡುತ್ತಾರೆ, ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ಎಂಬುದು ಅವರಿಗೆ ಗೊತ್ತಿಲ್ಲ. ಅಣುಬಾಂಬ್ ಅನ್ನು ಇಟ್ಟುಕೊಳ್ಳುವುದು ಹೇಗೆಂದು ಗೊತ್ತಿಲ್ಲದೇ ತಮ್ಮ ಬಾಂಬ್ ಗಳನ್ನು ಮಾರಾಟ ಮಾಡಲು ಎದುರು ನೋಡುತ್ತಿದೆ. ಆದರೆ ಯಾರೊಬ್ಬರು ಅದನ್ನು ಖರೀದಿಸುತ್ತಿಲ್ಲ, ಯಾಕೆಂದರೆ ಆ ಬಾಂಬ್ ನ ಗುಣಮಟ್ಟದ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.