ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ಹಿಡಿತ ಸಾಧಿಸಿದ ಬೆನ್ನಲ್ಲೇ ಜನರು ಭೀತಿಗೊಳಗಾಗಿ ದೇಶದಿಂದ ಪಲಾಯನಗೈಯಲು ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಏತನ್ಮಧ್ಯೆ ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ (ಆಗಸ್ಟ್ 16) ನಡೆದಿದೆ.
ಇದನ್ನೂ ಓದಿ:ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆಯಿಂದ ಯುವಕನ ಹತ್ಯೆ: ಆರೋಪಿ ಬಂಧನ
ಟೆಹ್ರಾನ್ ಟೈಮ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರ ಹಿಡಿದು ಜೋತಾಡುತ್ತಿದ್ದು, ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ಕೆಳಕ್ಕೆ ಬೀಳುತ್ತಿರುವ ಭಯಾನಕ ದೃಶ್ಯ ಸೆರೆಯಾಗಿದೆ ಎಂದು ವರದಿ ಹೇಳಿದೆ.
ಊಹಿಸಲು ಹಾಗೂ ನಂಬಲು ಸಾಧ್ಯವಿಲ್ಲದ ಸನ್ನಿವೇಶ ಇದಾಗಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರೂ ವಿಮಾನದಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ ಕಂಡು ಬಂದಿದೆ. ಅಲ್ಲದೇ ಅವರು ಕೆಳಕ್ಕೆ ಬೀಳುತ್ತಿರುವ ದೃಶ್ಯ ಭಯಾನಕ ಮತ್ತು ದೊಡ್ಡ ಶಬ್ದ ಕೇಳಿಬಂದಿರುವುದಾಗಿ ಅಸ್ವಾಕಾ ನ್ಯೂಸ್ ಟ್ವೀಟ್ ಮಾಡಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ನಂತರ ಸಾವಿರಾರು ಮಂದಿ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದು, ವಿಮಾನ ಏರಲು ಜನರು ನೂಕುನುಗ್ಗಲು, ಗುಂಪುಗೂಡಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ತಾಲಿಬಾನ್ ಉಗ್ರರ ಭೀತಿಯಿಂದಾಗಿ ಸಾವಿರಾರು ಮಂದಿ ಅಫ್ಘಾನ್ ನಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕಾಬೂಲ್ ನಿಂದ ಹೊರಡುವ ಕೆಲವು ವಿಮಾನಗಳಲ್ಲಿ ಜನರು ತುಂಬಿಕೊಂಡಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.