ಕಾಬೂಲ್: ತಾಲಿಬಾನ್ ಉಗ್ರರ ಆಡಳಿತದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಅಫ್ಘಾನಿಸ್ತಾನದ ಪಂಜ್ ಶೀರ್ ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಇದೀಗ ತಾಲಿಬಾನ್ ನೂರಾರು ಉಗ್ರರನ್ನು ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿ ಅಜೀಜುಲ್ಲಾ ಫಜ್ಲಿ ಮರು ನೇಮಕ
ಪಂಜ್ ಶೀರ್ ಪ್ರಾಂತ್ಯವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ನೂರಾರು ತಾಲಿಬಾನ್ ಮುಜಾಹಿದೀನ್ ಗಳು ಲಗ್ಗೆ ಇಟ್ಟಿರುವುದಾಗಿ ನ್ಯೂಸ್ ಏಜೆನ್ಸಿ ಸ್ಪುಟ್ನಿಕ್ ವರದಿ ಮಾಡಿದೆ. ಕಳೆದ ವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿದ್ದರು. ಅಲ್ಲದೇ ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯವೊಂದನ್ನು ಹೊರತುಪಡಿಸಿದಂತೆ ಉಳಿದೆಲ್ಲ 33 ಪ್ರಾಂತ್ಯಗಳು ಕೂಡಾ ತಾಲಿಬಾನ್ ವಶಕ್ಕೆ ತೆಗೆದುಕೊಂಡಿತ್ತು.
ಕಳೆದ ನಾಲ್ಕು ದಶಕಗಳಿಂದಲೂ ಈ ಪಂಜ್ ಶೀರ್ ಪ್ರಾಂತ್ಯದಲ್ಲಿ ನೆಲೆಯೂರಲು ತಾಲಿಬಾನಿಗಳು ಸಫಲರಾಗಿಲ್ಲವಾಗಿತ್ತು. ದಿ.ಅಹ್ಮದ್ ಶಾ ಅವರ ನೇತೃತ್ವದಲ್ಲಿ ಈ ಪ್ರಾಂತ್ಯವನ್ನು ಕಳೆದ ನಾಲ್ಕು ದಶಕಗಳಿಂದ ತಾಲಿಬಾನಿಗಳ ಸಹಿತ ಎಲ್ಲ ತೆರನಾದ ದಂಗೆಕೋರರಿಂದ ರಕ್ಷಿಸುತ್ತಾ ಬರಲಾಗಿದ್ದು, ಇಂದಿಗೂ ಸ್ಥಳೀಯಾಡಳಿತದ ಹಿಡಿದಲ್ಲಿಯೇ ಇದೆ.
ಕಾಬೂಲ್‌ನ ಉತ್ತರಕ್ಕೆ ನೂರಾರು ಕಿ.ಮೀ. ದೂರದಲ್ಲಿರುವ ಪಂಜ್‌ಶೀರ್ ಪ್ರಾಂತ್ಯ ಮತ್ತು ಕಣಿವೆ ಪ್ರದೇಶ ಈಗಲೂ ಸುರಕ್ಷಿತವಾಗಿದ್ದು ಸರಕಾರಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಷ್ಟು ಮಾತ್ರ ವಲ್ಲದೆ ಪಂಜ್‌ಶೀರ್‌ನ ನಿವಾಸಿಗಳು ಯಾವುದೇ ತೆರನಾದ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದಾರೆ. “1996- 2001ರ ವರೆಗಿನ ತಾಲಿಬಾನ್ ಆಡಳಿತದ ವೇಳೆಯೂ ಪಂಜ್‌ಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ದಂಗೆಕೋರರಿಗೆ ಸಾಧ್ಯವಾಗಿರಲಿಲ್ಲ’ ಎಂದು ಪ್ರಾಂತ್ಯದ ಆರ್ಥಿಕ ಇಲಾಖೆಯ ಮುಖ್ಯಸ್ಥರಾಗಿರುವ ಅಬ್ದುಲ್ ರಹಮಾನ್ ತಿಳಿಸಿದ್ದಾರೆ ಎಂದು ಸ್ಪಾನಿಶ್ ಮಾಧ್ಯಮ ವರದಿ ಮಾಡಿತ್ತು.
ಈ ಹಿಂದೆ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸಿದ್ದ ಸೋವಿಯತ್ ಮತ್ತು ಪಾಶ್ಚಾತ್ಯ ಸೇನೆಗಳ ಯಂತ್ರೋ ಪಕರಣಗಳು, ಚೆಕ್‌ಪಾಯಿಂಟ್ ಮತ್ತು ಹಳೆಯ ಸೇತುವೆಗಳ ಅವಶೇಷಗಳಿಂದ ಪಂಜ್‌ಶೀರ್ ಮತ್ತು ಕಾಬೂಲ್ ನಡುವಣ ರಸ್ತೆಯನ್ನು ಬೇರ್ಪಡಿಸಲಾಗಿದೆ. ದಂಗೆಕೋರರು ಪ್ರಾಂತ್ಯವನ್ನು ಪ್ರವೇಶಿಸಿದ್ದೇ ಆದಲ್ಲಿ ಇವುಗಳನ್ನು ಸ್ಥಳೀಯಾಡಳಿತ ಬಳಸಿಕೊಂಡು ದಾಳಿ ಕೋರರ ಮೇಲೆ ಪ್ರತಿದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಇತ್ತ ತಾಲಿಬಾನಿಗಳು ತಲೆಹಾಕಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿತ್ತು.