ತಾಲಿಬಾನಿಗರಿಗೆ ಪಾಕ್ ನೀಡುತ್ತಾ ಬಂದಿರುವ ನೆರವಿಗೆ ಬಹಿರಂಗ ಸಾಕ್ಷ್ಯ ಎಂಬಂತೆ, ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ರವಿವಾರ ಅಫ್ಘಾನಿಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಆ ಮೂಲಕ ತಾಲಿಬಾನ್ ಆಡಳಿತ ಆರಂಭವಾದ ಬಳಿಕ ಭೇಟಿ ನೀಡುತ್ತಿರುವ ಮೊದಲ ವಿದೇಶಿ ಸಚಿವ ಎಂದೆನಿಸಿದ್ದಾರೆ. ಪಾಕಿಸ್ಥಾನವು ಅಫ್ಘಾನ್‌ನಲ್ಲಿ ಸಕಾರಾತ್ಮಕ ಪಾತ್ರ ವಹಿಸಲಿದೆ ಎಂದು ಈಗಾಗಲೇ ಪಾಕ್ ಘೋಷಿಸಿದೆ. ಈ ನಡುವೆ, ಆಫ^ನ್‌ನಲ್ಲಿ ಭಾರತ ಹೊಂದಿರುವ ಪ್ರಾಬಲ್ಯವನ್ನು ತಡೆಯುವುದೇ ಪಾಕಿಸ್ಥಾನದ ಉದ್ದೇಶವಾಗಿದೆ ಎಂದು ರಕ್ಷಣ ಗುಪ್ತಚರ ಸಂಸ್ಥೆಯ ಮೂಲಗಳನ್ನು ಉಲ್ಲೇ ಖೀಸಿ ಅಮೆರಿಕ ಸರಕಾರ ಹೇಳಿದೆ. ಇದೇ ವೇಳೆ, ಅಫ್ಘಾನ್‌ನ ನಿರಾಶ್ರಿತರಿಗೆ ಆಶ್ರಯ ನೀಡಲು ಕನಿಷ್ಠ 12 ದೇಶಗಳು ಮುಂದೆ ಬಂದಿವೆ ಎಂದು ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕನ್ ಶನಿವಾರ ಹೇಳಿದ್ದಾರೆ.
14 ಮಂದಿ ಬಂಧನ: ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನ್ ಬೆಂಬಲಿಸಿ ಪೋಸ್ಟ್‌ಗಳನ್ನು ಹಾಕಿದ್ದ 14 ಮಂದಿಯನ್ನು ಅಸ್ಸಾಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ, ಐಟಿ ಕಾಯ್ದೆ ಮತ್ತು ಸಿಆರ್‌ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಾಲಿಬಾನ್‌ಗಳಿಗೆ ಜೈ ಎಂದ ಘನಿ ಸಹೋದರ!: ಅಫ್ಘಾನ್ ಮಾಜಿ ಅಶ್ರಫ್ ಘನಿಯವರ ಸಹೋದರ ಹಶ್ಮತ್ ಘನಿ, ತಾಲಿಬಾನಿ ನಾಯಕರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆಯೇ? ಈ ಪ್ರಶ್ನೆಗೆ ಪುಷ್ಟಿ ನೀಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಶ್ಮತ್ ಘನಿ ಅಫ್ಘಾನಿಸ್ತಾನದ ದೈತ್ಯ ಉದ್ಯಮಿಗಳಲ್ಲೊಬ್ಬರು. “ಕುಚೀಸ್ ಸಂಘಟನೆ’ಯ ಮುಖ್ಯಸ್ಥ ಹಾಗೂ ಕಾಬೂಲ್‌ನಲ್ಲಿರುವ “ದ ಘನಿ ಗ್ರೂಪ್’ ಸಂಸ್ಥೆಯ ಅಧ್ಯಕ್ಷ. ಅವರ ಉದ್ಯಮ, ಯುಎಇನಲ್ಲೂ ಹರಡಿದೆ. ಅಫ್ಘಾನಿಸ್ಥಾನದಲ್ಲಿ ದೊಡ್ಡ ಹೆಗ್ಗುರುತು ಉಳ್ಳ ಹಶ್ಮತ್, ಈಗ ತಾಲಿಬಾನಿಗಳಿಗೆ ಬೆಂಬಲ ಘೋಷಿಸಿರುವುದು ಬಿಸಿಬಿಸಿ ಸುದ್ದಿಯೆನಿಸಿದೆ.
ಕಾಬೂಲ್‌ಗೆ ಕಳಿಸಿ: ಮಹಿಳಾ ಯೋಧರ ಅರ್ಜಿ :
ಅಫ್ಘಾನಿಸ್ಥಾನದಿಂದ ಪರಾರಿಯಾಗಲು ಜನರು ಹರಸಾಹಸ ಪಡುತ್ತಿರುವ ಸುದ್ದಿಗಳ ನಡುವೆಯೇ ಭಾರತದ ಇಂಡೋ-ಟಿಬೆಟಿಯನ್ ಪೊಲೀಸ್ ಪಡೆಯ (ಐಟಿಬಿಪಿ) ಇಬ್ಬರು ಮಹಿಳಾ ಯೋಧರು “ನಮ್ಮನ್ನು ಕಾಬೂಲ್‌ನಲ್ಲೇ ನಿಯೋಜಿಸಿ’ ಎಂದು ಕೋರಿ ದಿಲ್ಲಿ ಹೈಕೋರ್ಟ್ ಮೊರೆಹೋಗಿದ್ದಾರೆ. ಈ ಅರ್ಜಿಯನ್ನು ನೋಡಿ ನ್ಯಾಯಾಧೀಶರೇ ಬೆರಗಾಗಿದ್ದಾರೆ. ನಮ್ಮನ್ನು 2020ರ ಆಗಸ್rನಲ್ಲಿ ಕಾಬೂಲ್ ರಾಯಭಾರ ಕಚೇರಿ ಭದ್ರತೆಗೆ ನಿಯೋಜಿಸಲಾಗಿತ್ತು. ಇನ್ನೂ 2 ವರ್ಷಗಳ ಸೇವೆಯಿತ್ತಾದರೂ, ಈ ವರ್ಷ ಜೂನ್‌ನಲ್ಲಿ ನಮ್ಮನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಅಲ್ಲಿನ ರಾಯಭಾರಿ ಕಚೇರಿಗೆ ಬರುವ ಮಹಿಳೆಯರು ಮತ್ತು ಮಕ್ಕಳಿಗೆ ನಮ್ಮ ಆವಶ್ಯಕತೆ ಇದೆ ಎಂದು ಮಹಿಳಾ ಯೋಧರು ಅರ್ಜಿಯಲ್ಲಿ ಹೇಳಿದ್ದಾರೆ. ಆದರೆ ಐಟಿಬಿಪಿ ನಿಯಮದ ಪ್ರಕಾರ ಯಾವುದೇ ಯೋಧರಿಗೆ ಅವರ ಕೆಲಸದ ಸ್ಥಳವನ್ನು ನಿರ್ಧರಿಸುವ ಅವಕಾಶವಿಲ್ಲವಾದ ಕಾರಣ ಅರ್ಜಿ ಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಮೆಹಬೂಬಾ ವಿರುದ್ಧ ಬಿಜೆಪಿ ಕಿಡಿ :
ಅಫ್ಘಾನ್ ಬೆಳವಣಿಗೆ ಹಿನ್ನೆಲೆ ಶನಿವಾರ ಮಾತನಾಡಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ, “ಸೂಪರ್‌ಪವರ್ ಅಮೆರಿಕವು ಈಗ ತಾಲಿಬಾನ್‌ಗೆ ಹೆದರಿ ಗಂಟುಮೂಟೆ ಕಟ್ಟಿದೆ. ಈಗ ಕೇಂದ್ರ ಸರಕಾರವೂ 370ನೇ ವಿಧಿಯನ್ನು ಮರುಸ್ಥಾಪಿಸಬೇಕು. ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ. ಅನಂತರ ಕಾಲ ಮೀರಿ ಹೋಗಬಹುದು’ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ಕಾಲವೆಲ್ಲ ಹೋಯಿತು. ಇದು ಮೋದಿಯ ಭಾರತ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಅಲರ್ಟ್ ಆಗಿವೆ. ತಾಲಿಬಾನ್ ಸೇರಿದಂತೆ ಯಾವುದೇ ಸವಾಲನ್ನು ಎದುರಿಸಲೂ ನಾವು ಸನ್ನದ್ಧರಾಗಿದ್ದೇವೆ.
– ವಿಜಯ್‌ಕುಮಾರ್, ಕಾಶ್ಮೀರ ಐಜಿಪಿ