Advertisement

“ಅವರು ಬದಲಾಗಿಲ್ಲ, ನಮಗೆ ಸಾವೇ ಗತಿ’ : ತಾಲಿಬಾನ್‌ ಆಡಳಿತದ ಕುರಿತು ಹೆಂಗಳೆಯರ ನೋವಿನ ಮಾತು

08:20 PM Aug 20, 2021 | Team Udayavani |

ಕಾಬೂಲ್‌: “ಇಲ್ಲಿ ನಾವ್ಯಾರೂ ಸುರಕ್ಷಿತರಲ್ಲ’, “ನನ್ನ ಮನೆಗೇನಾದರೂ ತಾಲಿಬಾನಿಗರು ಪ್ರವೇಶಿಸಿದರೆ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ’…
ಇದು ತಾಲಿಬಾನ್‌ ಆಡಳಿತದ ಕುರಿತ ಪ್ರಶ್ನೆಗೆ ಅಫ್ಘಾನಿಸ್ತಾನದ ಮಹಿಳೆಯರು ನೀಡಿರುವ ಉತ್ತರ.

Advertisement

ಆಫ್ಘನ್ ತಾಲಿಬಾನ್‌ ವಶಕ್ಕೆ ಸಿಗುತ್ತಿದ್ದಂತೆಯೇ ಪತ್ರಕರ್ತೆಯರನ್ನು ಕೊಲ್ಲಲಾಗಿದೆ, ಉದ್ಯೋಗಕ್ಕೆ ತೆರಳದಂತೆ ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಆಗುತ್ತಿರುವವರ ಮೇಲೆ ಗುಂಡು ಹಾರಿಸಲಾಗಿದೆ. ಈ ಎಲ್ಲ ನಿದರ್ಶನಗಳೂ ಕಣ್ಣ ಮುಂದಿರುವಾಗ “ನಾವು ಶಾಂತಿ ಬಯಸುತ್ತೇವೆ’ ಎಂಬ ಉಗ್ರರ ಮಾತನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಯಾರಾದರೂ ಇರಲು ಸಾಧ್ಯವೇ?

ಉಗ್ರಾಡಳಿತ ಕುರಿತು ಪ್ರತಿಕ್ರಿಯಿಸಿರುವ ಆಫ್ಘನ್‌ನ ಮಹಿಳೆಯರು, “ನಮಗ್ಯಾರಿಗೂ ಇಲ್ಲಿ ಸೇಫ್ ಎಂಬ ಭಾವನೆಯೇ ಬರುತ್ತಿಲ್ಲ. ತಾಲಿಬಾನ್‌ ಉಗ್ರರ ಬಾಯಲ್ಲಿ ಬರುವ ಒಂದು ಮಾತನ್ನೂ ನಾವು ನಂಬುವುದಿಲ್ಲ’ ಎಂದು ಸಿಎನ್‌ಎನ್‌ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಉಗ್ರರು ಬದಲಾಗಿದ್ದಾರೆ ಎಂಬುದೇ ದೊಡ್ಡ ಸುಳ್ಳು. ಅವರಿಗೆ ಪ್ರಜಾಪ್ರಭುತ್ವವೆಂದರೆ ಏನೆಂದೇ ತಿಳಿದಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆಯು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬ ಕಾರಣಕ್ಕೆ ತಾಲಿಬಾನಿಗರು ಸುಳ್ಳಿನ ಕಂತೆ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ 20ರ ಹರೆಯದ ಯುವತಿ.

ಇದನ್ನೂ ಓದಿ :ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ

ತಾಲಿಬಾನ್‌ ಮಾತನ್ನು ನಂಬಿ ಮೊನ್ನೆ ತಾನೇ ಕುಂದೂಝ್ ಪ್ರಾಂತ್ಯದಲ್ಲಿ ಶಿಕ್ಷಕಿಯೊಬ್ಬರು ಆಟೋರಿಕ್ಷಾದಲ್ಲಿ ಶಾಲೆಗೆ ತೆರಳಿದ್ದರು. ಆಟೋ ನಿಲ್ಲಿಸಿದ ಉಗ್ರರು, ಆ ಶಿಕ್ಷಕಿಯೊಂದಿಗೆ ಆಕೆಯ ಕುಟುಂಬದ ಪುರುಷರಾರೂ ಇರಲಿಲ್ಲ ಎಂಬ ಕಾರಣಕ್ಕೆ ಆಟೋಚಾಲಕನಿಗೆ ಥಳಿಸಿದ್ದಾರೆ ಎಂದೂ ಯುವತಿ ಹೇಳಿದ್ದಾರೆ.

Advertisement

ಕಾಬೂಲ್‌ ವಿವಿಯ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, “ನನ್ನ ಘನತೆ, ನನ್ನ ಹೆಮ್ಮೆ, ಒಬ್ಬ ಹೆಣ್ಣಾಗಿ ನನ್ನ ಅಸ್ತಿತ್ವ, ನನ್ನ ಬದುಕು.. ಎಲ್ಲವೂ ಅಪಾಯದಲ್ಲಿದೆ. ಅವರು ಯಾವಾಗ ನಮ್ಮ ಮನೆಗಳಿಗೆ ನುಗ್ಗಿ, ನಮ್ಮನ್ನು ಹೊತ್ತೂಯ್ಯುತ್ತಾರೋ, ಅತ್ಯಾಚಾರ ಎಸಗುತ್ತಾರೋ ಎಂಬ ಭಯ ಕನಸಲ್ಲೂ ನಮ್ಮನ್ನು ನಡುಗಿಸುತ್ತಿದೆ. ಅವರೇನಾದರೂ ನನ್ನ ಮನೆಗೆ ಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಗೆಳತಿಯರೂ ಇದೇ ನಿರ್ಧಾರ ಮಾಡಿದ್ದಾರೆ. ತಾಲಿಬಾನ್‌ನ ಹಿಂಸೆಗೆ ಬಲಿಯಾಗುವುದಕ್ಕಿಂತ ಸಾಯುವುದೇ ಉತ್ತಮ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next