Advertisement

ಅಫ್ಘಾನ್‌- ತಾಲಿಬಾನ್‌ ಶಾಂತಿ ಸಭೆ

01:19 AM Sep 13, 2020 | mahesh |

ದೋಹಾ: ಅಫ್ಘಾನಿಸ್ಥಾನದಲ್ಲಿ ಸುಮಾರು 2 ದಶಕಗಳಿಂದ ನಡೆದಿದ್ದ ಸಂಘರ್ಷ ಕೊನೆಗೊಳಿಸುವುದಕ್ಕಾಗಿ ಆಫ್ಘನ್‌ ಸರಕಾರ‌ ಮತ್ತು ತಾಲಿಬಾನ್‌ನ ನಡುವೆ ಶನಿವಾರದಿಂದ ದೋಹಾ­ದಲ್ಲಿ ಶಾಂತಿ ಸ್ಥಾಪನಾ ಸಭೆ ಆರಂಭವಾಗಿದೆ. ಸೋಮ­ವಾರ ಅಧಿಕೃತ ಮಾತುಕತೆ ಆರಂಭವಾಗಲಿದ್ದು, ಫ‌ಲಿತಾಂಶ ಏನಾಗಲಿದೆಯೋ ಎಂದು ಭಾರತವೂ ಕಾದುನೋಡುತ್ತಿದೆ.

Advertisement

ಈ ವೇಳೆ ಭಾರತ, ತಾನು ಅಫ್ಘಾನಿಸ್ಥಾನದಲ್ಲಿ ಶಾಂತಿ­ ಸ್ಥಾಪನೆಗೆ, ಕದನ ವಿರಾಮಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಈ ಸಭೆಯಲ್ಲಿ ವಿಡಿಯೋ ಮೂಲಕ ಸಂದೇಶ ನೀಡಿರುವ ವಿದೇಶಾಂಗ ಸಚಿವ ಡಾ| ಎಸ್‌. ಜೈಶಂಕರ್‌, ಈ ಶಾಂತಿ ಪ್ರಕ್ರಿಯೆಯು ಆಫ್ಘಾನಿಸ್ತಾನದ ಸಾರ್ವಭೌಮತೆಯನ್ನು ಗೌರವಿಸುವಂತಿರಬೇಕು, ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವವನ್ನು ಉತ್ತೇಜಿಸುವಂತಿರಬೇಕು ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನದ ನೆಲ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಅಮೆರಿಕದಲ್ಲಿ 9/11 ಅವಳಿ ಕಟ್ಟಡ ಧ್ವಂಸವಾಗಿ ಸಾವಿರಾರು ಜನರ ಮೃತಪಟ್ಟಾಗ, ಉಗ್ರ ಒಸಾಮಾ ಬಿನ್‌ ಲಾಡೆನ್‌ನ ಹೆಡೆಮುರಿಕಟ್ಟಲು ಅಮೆರಿಕನ್‌ ಪಡೆಗಳು ಅಫ್ಘಾನಿಸ್ಥಾನ ಪ್ರವೇಶಿಸಿದ್ದವು. ಆ ಸಮಯದಲ್ಲಿ ಈ ಅಲ್‌ಖೈದಾ ಉಗ್ರನಿಗೆ ತಾಲಿಬಾನ್‌ ಆಶ್ರಯ ಒದಗಿಸಿತ್ತು. ಅಮೆರಿಕನ್‌ ಪಡೆಗಳು ಅಫ್ಘಾನಿಸ್ಥಾನಕ್ಕೆ ಕಾಲಿಟ್ಟ ಅನಂತರ ತಾಲಿಬಾನ್‌ನ ಬಲ ಬಹುತೇಕ ಕುಂದಿತ್ತಾದರೂ,ದಶಕದಿಂದ ಸಂಘರ್ಷ ಮುಂದುವರಿದೇ ಇದ್ದು, ಇದರಲ್ಲಿ ಅಸಂಖ್ಯ ಅಮೆರಿಕನ್‌ ಹಾಗೂ ಅಫ‌^ನ್‌ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಟ್ರಂಪ್‌ ಸರಕಾರ‌ ಕೆಲವು ವರ್ಷಗಳಿಂದ ಅಫ್ಘಾನಿಸ್ಥಾನದಿಂದ ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಅದು ತಾಲಿಬಾನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಫ್ಘಾನಿಸ್ಥಾನ ಸರಕಾರ‌ಕ್ಕೆ ಸಲಹೆ ನೀಡುತ್ತಿದ್ದು, ಈಗಿನ ಸಭೆಗೂ ಅಮೆರಿಕವೇ ಮಧ್ಯಸ್ಥಿಕೆ ವಹಿಸಿದೆ. ಆದರೂ, ಅಮೆರಿಕನ್‌ ಪಡೆಗಳು ಸಂಪೂರ್ಣ ಹಿಂದೆ ಸರಿದರೆ ತಾಲಿಬಾನ್‌ ಮತ್ತೆ ಅಫ್ಘಾನಿಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂಬ ಆತಂಕವಂತೂ ಇದ್ದೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next