Advertisement

ಕಿವೀಸ್‌ಗೆ ಅಫ್ಘಾನ್‌ ಆಘಾತ!

09:41 AM Jan 26, 2018 | Team Udayavani |

ಕ್ರೈಸ್ಟ್‌ಚರ್ಚ್‌: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆತಿಥೇಯ ನ್ಯೂಜಿಲ್ಯಾಂಡಿನ ಆಟ ಮುಗಿದಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಪಾಯಕಾರಿ ಅಫ್ಘಾನಿಸ್ಥಾನ ವಿರುದ್ಧ 202 ರನ್ನುಗಳ ಆಘಾತಕಾರಿ ಸೋಲುಂಡು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. ಅಫ್ಘಾನ್‌ ಇನ್ನು ಆಸ್ಟ್ರೇಲಿಯ ಸವಾಲನ್ನು ಎದುರಿಸಲಿದೆ.

Advertisement

ಶುಕ್ರವಾರ ನಡೆಯಲಿರುವ ಕೊನೆಯ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ- ಬಾಂಗ್ಲಾ ದೇಶ ಎದುರಾಗಲಿದ್ದು, ಇಲ್ಲಿ ಗೆದ್ದ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಏಶ್ಯದ 3 ತಂಡಗಳು  ಸೆಣಸಲಿರುವುದು ವಿಶೇಷ.

ಅಫ್ಘಾನ್‌ ಸರ್ವಾಂಗೀಣ ಪ್ರಾಬಲ್ಯ
ನವೀನ್‌ ಉಲ್‌ ಹಕ್‌ ನೇತೃತ್ವದ ಅಫ್ಘಾನಿ ಸ್ಥಾನ ಕ್ರಿಕೆಟಿನ ಎಲ್ಲ ವಿಭಾಗಗಳಲ್ಲೂ ಸ್ಪಷ್ಟ ಮೇಲುಗೈ ಸಾಧಿಸಿ ಕೇವಲ ನ್ಯೂಜಿಲ್ಯಾಂಡಿಗಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿಗೇ ಶಾಕ್‌ ಕೊಟ್ಟಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಏಶ್ಯದ ಈ ತಂಡ 6 ವಿಕೆಟಿಗೆ 309 ರನ್ನುಗಳ ಬೃಹತ್‌ ಮೊತ್ತವನ್ನು ರಾಶಿ ಹಾಕಿತು. ಜವಾಬಿತ್ತ ನ್ಯೂಜಿಲ್ಯಾಂಡ್‌ ಅಫ್ಘಾನ್‌ ಸ್ಪಿನ್‌ ಬಲೆಗೆ ಸಿಲುಕಿ 28.1 ಓವರ್‌ಗಳಲ್ಲಿ 107 ರನ್ನುಗಳಿಗೆ ಸರ್ವಪತನ ಕಂಡಿತು.

ಆಫ್ಸ್ಪಿನ್ನರ್‌ ಮುಜೀಬ್‌ ಜದ್ರಾನ್‌ ಮತ್ತು ಲೆಗ್‌ಸ್ಪಿನ್ನರ್‌ ಕೈಸ್‌ ಅಹ್ಮದ್‌ ಸೇರಿಕೊಂಡು ಕಿವೀಸ್‌ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಮುಜೀಬ್‌ 14 ರನ್ನಿಗೆ 4 ವಿಕೆಟ್‌ ಹಾರಿಸಿದರೆ, ಅಹ್ಮದ್‌ 33 ರನ್ನಿಗೆ 4 ವಿಕೆಟ್‌ ಕಿತ್ತರು. ಇನ್‌ಫಾರ್ಮ್ ಆರಂಭಕಾರ ರಚಿನ್‌ ರವೀಂದ್ರ ದ್ವಿತೀಯ ಓವರಿನಲ್ಲಿ ರನೌಟಾಗಿ ನಿರ್ಗಮಿಸುವುದರೊಂದಿಗೆ ಕಿವೀಸ್‌ಗೆ ಬ್ಯಾಟಿಂಗ್‌ ಕಂಟಕ ಎದುರಾಗತೊಡಗಿತು. ಈ ಸಂಕಟದಿಂದ ಆತಿಥೇಯ ಪಡೆಗೆ ಪಾರಾಗಲು ಸಾಧ್ಯವಾಗಲೇ ಇಲ್ಲ. 

ನ್ಯೂಜಿಲ್ಯಾಂಡ್‌ 7 ಓವರ್‌ ಆಗು ವಷ್ಟ ರಲ್ಲಿ 20 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಿತು. ಬಳಿಕ ಕ್ಯಾಟೀನ್‌ ಕ್ಲಾರ್ಕ್‌ (38) ಮತ್ತು ಡೇಲ್‌ ಫಿಲಿಪ್ಸ್‌ (31) ಸೇರಿಕೊಂಡು ಸಣ್ಣ ಮಟ್ಟದ ಹೋರಾಟ ವೊಂದನ್ನು ಸಂಘಟಿಸಿದರೂ ಇದರಿಂದ ಯಾವುದೇ ಲಾಭವಾಗಲಿಲ್ಲ. ಇವರಿಬ್ಬರ ಜತೆಯಾಟದಲ್ಲಿ 66 ರನ್‌ ಒಟ್ಟುಗೂಡಿತು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಕಿವೀಸ್‌ ಕುಸಿತ ತೀವ್ರಗೊಂಡಿತು. ಎಷ್ಟರ ಮಟ್ಟಿಗೆಂದರೆ, 21 ರನ್‌ ಅಂತರದಲ್ಲಿ ಕೊನೆಯ 6 ವಿಕೆಟ್‌ ಹಾರಿ ಹೋಗಿತ್ತು!

Advertisement

ಅಫ್ಘಾನಿಸ್ಥಾನ ಕೂಟದಲ್ಲೇ ಅಮೋಘ ವೆನಿಸುವಂಥ ಬ್ಯಾಟಿಂಗ್‌ ಮೂಲಕ ಕಿವೀಸ್‌ ಬೌಲರ್‌ಗಳ ಮೇಲೆರಗಿ ಹೋಯಿತು. ಒಟ್ಟು 4 ಮಂದಿ 60 ರನ್‌ ಗಡಿ ದಾಟಿ ಮುನ್ನುಗ್ಗಿದರು. ಇವರಲ್ಲಿ ಆರಂಭಿಕರಾದ ರಹ್ಮನುಲ್ಲ ಗುರ್ಬಜ್‌ (69) ಮತ್ತು ಇಬ್ರಾಹಿಂ ಜದ್ರಾನ್‌ (68) ಕೂಡ ಸೇರಿದ್ದರು. ಇವರು 20.4 ಓವರ್‌ ಜತೆಯಾಟ ನಿಭಾಯಿಸಿ ಮೊದಲ ವಿಕೆಟಿಗೆ 117 ರನ್‌ ಪೇರಿಸಿ ಭದ್ರ ಬುನಾದಿ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಬಹಿರ್‌ ಶಾ ಅಜೇಯ 67 ರನ್‌ ಬಾರಿಸಿದರೆ, 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅಜ್ಮತುಲ್ಲ ಒಮರ್‌ಜಾಯಿ ಸ್ಫೋಟಕ ಆಟಕ್ಕೆ ಮುಂದಾಗಿ ಕೇವಲ 23 ಎಸೆತಗಳಲ್ಲಿ 66 ರನ್‌ ಸಿಡಿಸಿದರು. ಇದರಲ್ಲಿ 7 ಪ್ರಚಂಡ ಸಿಕ್ಸರ್‌ ಜತೆಗೆ 3 ಬೌಂಡರಿ ಸೇರಿತ್ತು. ಈ ಸಾಹಸಕ್ಕಾಗಿ ಅಜ್ಮತುಲ್ಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next