Advertisement
ಅಫ್ಘಾನಿಸ್ಥಾನದಲ್ಲಿ 1996ರಿಂದ ಆಡಳಿತ ನಡೆಸುತ್ತಿದ್ದ ತಾಲಿಬಾನ್ 2001ರಲ್ಲಿ ಯುಎಸ್ ಆಕ್ರಮಣದ ಅನಂತರ ಅಲ್ಲಿಂದ ಹಿಂದೆ ಸರಿದಿತ್ತು. ಎರಡು ದಶಕಗಳ ಬಳಿಕ ಅಮೆರಿಕ ಸಹಿತ ನ್ಯಾಟೋ ಪಡೆಗಳು ಅಲ್ಲಿಂದ ವಾಪಸಾಗುತ್ತಿದ್ದಂತೆಯೇ 2021ರಲ್ಲಿ ತಾಲಿಬಾನಿಗಳು ಮತ್ತೂಮ್ಮೆ ಅಫ್ಘಾನಿಸ್ಥಾನದ ಮೇಲೆ ದಾಳಿ ನಡೆಸಿ ಮತ್ತೆ ಅಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ತಾಲಿಬಾನಿ ಸರಕಾರ ಮಹಿಳೆಯರ ಬಗೆಗಿನ ತನ್ನ ಕಠಿನ ನಿಲುವನ್ನು ಸಡಿಲಿಸುವ ಸಂಕೇತ ನೀಡಿತ್ತು. ಅದರಂತೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸಾರಿತ್ತು. ಆದರೆ ದೇಶದ ಆಡಳಿತದ ಮೇಲೆ ತನ್ನ ಹಿಡಿತ ಬಿಗಿಗೊಳ್ಳುತ್ತಿದ್ದಂತೆಯೇ ಈಗ ತಾಲಿಬಾನಿ ಸರಕಾರ ಮಹಿಳೆಯರಿಗೆ ಬುರ್ಖಾ ಧಾರಣೆ ಕಡ್ಡಾಯ, ಮಹಿಳೆಯರನ್ನು ಶಿಕ್ಷಣದಿಂದ ದೂರವಿರಿಸುವಂತಹ ತನ್ನ ಈ ಹಿಂದಿನ ಸ್ತ್ರೀ ವಿರೋಧಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಹಳೆಯ ಚಾಳಿಯನ್ನು ಮುಂದುವರಿಸಿದೆ.
Related Articles
Advertisement
ಪ್ರಪಂಚದಲ್ಲಿಯೇ ಅತೀ ಕಡಿಮೆ ಸಾಕ್ಷರರನ್ನು ಅಫ್ಘಾನಿಸ್ಥಾನ ಹೊಂದಿದೆ. ಆದರೆ ದೇಶದಲ್ಲಿ ತಾಲಿಬಾನೇತರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಂದರೆ 2001ರ ಅನಂತರ ಅಕ್ಷರಸ್ಥರ ಸಂಖ್ಯೆ ಮೊದಲಿಗಿಂತ ಏರಿಕೆಯನ್ನು ಕಂಡಿತ್ತು. ಕಳೆದ ಒಂದು ದಶಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿಯೂ ಕೊಂಚ ಪ್ರಗತಿ ಕಂಡುಬಂದಿತ್ತು ಎಂದು ವಿಶ್ವಸಂಸ್ಥೆಯ ಅಂಕಿಅಂಶಗಳು ಹೇಳುತ್ತವೆ.
2011ರಲ್ಲಿ ಅಫ್ಘಾನಿಸ್ಥಾನದಲ್ಲಿ ಶೇ. 32ರಷ್ಟಿದ್ದ ಹೆಣ್ಣು ಮಕ್ಕಳ ಶಿಕ್ಷಣ 2018ರಲ್ಲಿ ಶೇ. 43ಕ್ಕೆ ಏರಿಕೆ ಕಂಡಿದೆ. ಇಂದಿಗೂ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಹೋಲಿಸಿದಾಗ ಒಟ್ಟಾರೆಯಾಗಿ ಶೇ. 27ರಷ್ಟು ಅನಕ್ಷರಸ್ಥರು ಅಫ್ಘಾನಿಸ್ಥಾನದಲ್ಲಿದ್ದಾರೆ.
ಶಿಕ್ಷಣದ ಜತೆಗೆ ಅಫ್ಘಾನಿಸ್ಥಾನ ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ನಿರುದ್ಯೋಗ. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ.
3.7 ಮಿಲಿಯನ್ ಶಿಕ್ಷಣ ವಂಚಿತರು :
ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಲ್ಲಿ ಅಫ್ಘಾನಿಸ್ಥಾನ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶಗಳಲ್ಲಿ ಒಂದು. ಜತೆಗೆ ಅಷ್ಟೇ ಬಡತನವನ್ನು ಹೊಂದಿರುವ ದೇಶವೂ ಹೌದು. ಅಫ್ಘಾನಿಸ್ಥಾನದಲ್ಲಿ ಸುಮಾರು 30 ವರ್ಷಗಳಿಂದಲೂ
ಶಿಕ್ಷಣ ವ್ಯವಸ್ಥೆ ಏರಿಳಿತದಲ್ಲೇ ಸಾಗುತ್ತಿದೆ. ಇಲ್ಲಿನ ಅದೆಷ್ಟೋ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಕೂಡ ಇಂದಿಗೂ ಕನಸಾಗಿ ಉಳಿದಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಪರಿಸ್ಥಿತಿಯನ್ನು ಹೇಳತೀರದು. ವಿಶ್ವಸಂಸ್ಥೆಯ ಅಂಕಿ-ಅಂಶದ ಪ್ರಕಾರ ಅಫ್ಘಾನಿಸ್ಥಾನದಲ್ಲಿ ಸುಮಾರು 3.7 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದರಲ್ಲಿ ಶೇ. 60ರಷ್ಟು ಹೆಣ್ಣು ಮಕ್ಕಳು.
ಬೀದಿಗಿಳಿದ ಮಹಿಳೆಯರು :
ಇವೆಲ್ಲದರ ನಡುವೆ ತಮ್ಮ ಹಕ್ಕುಗಳಿಗಾಗಿ, ದೇಶದಲ್ಲಿನ ತಮ್ಮ ಅಸ್ತಿತ್ವಕ್ಕಾಗಿ ಅಲ್ಲಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಧೃತಿಗೆಡದೇ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ. ಇದೀಗ ತಾಲಿಬಾನ್ ಸರಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿದೆ. ಅಲ್ಲಿನ ಕ್ರೀಡಾಪಟುಗಳು ಇದನ್ನು ತಾಲಿಬಾನ್ ಆಡಳಿತದ ದುರಂತ ಎಂದು ಜರೆದಿದ್ದಾರೆ. ತಾಲಿಬಾನ್‌ನ ಈ ಕ್ರಮವನ್ನು ಭಾರತ ಸಹಿತ ಹಲವು ರಾಷ್ಟ್ರಗಳು ಖಂಡಿಸಿವೆ. ಅಫ್ಘಾನಿ ಸ್ಥಾನ ದಲ್ಲಿ ಸಾವಿರಾರು ವಿದ್ಯಾ ರ್ಥಿನಿ ಯರು ಬೀದಿ ಗಿಳಿದು ಪ್ರತಿ ಭಟಿಸುತ್ತಿದ್ದಾರೆ. ಶಿಕ್ಷಣ ದಿಂದ ನಿರ್ಬಂಧಿಸಿ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಬದಲು ನಮ್ಮನ್ನು ಒಂದೇ ಸಲ ಶಿರಚ್ಛೇದ ಮಾಡಿ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಿ ದ್ದಾರೆ. ಇದರ ಬೆನ್ನಲ್ಲೇ ಅಲ್ಲಿನ ಪುರುಷರು ಅದ ರಲ್ಲೂ ಮುಖ್ಯವಾಗಿ ಯುವಕರು ತಮ್ಮ ತರಗತಿಗಳನ್ನು ಬಹಿಷ್ಕರಿಸಿ ಮಹಿಳೆಯರ ಹಕ್ಕಿಗಾಗಿ ದನಿಗೂಡಿಸಿ ದ್ದಾರೆ. ಇದರ ಹೊರ ತಾಗಿಯೂ “ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಹಾಗೂ ಉದ್ಯೋಗದಲ್ಲಿ ತೊಡಗಿಕೊಳ್ಳುವುದು ಅಫ್ಘಾನಿಸ್ಥಾನದ ಸಂಸ್ಕೃತಿಯಲ್ಲ’ ಎಂದು ತಾಲಿಬಾನ್ ಸರಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ವಿಶ್ವಸಂಸ್ಥೆ ಆದಿಯಾಗಿ ಪ್ರಪಂಚದ ಬಹುತೇಕ ರಾಷ್ಟ್ರಗಳು ಅಫ್ಘಾನ್ ಮಹಿಳೆಯರ ಪರ ದನಿ ಎತ್ತಿದರೂ ತಾಲಿಬಾನಿಗಳ ಕಿವಿಗೆ ಇವ್ಯಾವೂ ಕೇಳಿಸುತ್ತಿಲ್ಲ.
ಲೆಟ್‌ಹರ್‌ಲರ್ನ್ ಅಭಿಯಾನ :
ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ನಿರ್ಬಂಧಿಸಲಾಗಿರುವ ಶಿಕ್ಷಣ ಹಕ್ಕನ್ನು ಮರಳಿ ನೀಡಬೇಕೆಂದು ಆಗ್ರಹಿಸಿ ಸಾಮಾ ಜಿಕ ಜಾಲತಾಣಗಳಲ್ಲಿ ಲೆಟ್‌ಹರ್‌ಲರ್ನ್ ಅಭಿಯಾನವನ್ನು ಆರಂಭಿಸ ಲಾಗಿದೆ. ಈ ಅಭಿಯಾನಕ್ಕೆ ದೇಶ ವಿದೇಶಗಳ ಗಣ್ಯರು, ಕ್ರೀಡಾಪಟುಗಳ ಸಹಿತ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಅಫ್ಘಾನ್‌ನ ಹೆಣ್ಣು ಮಕ್ಕಳ ಹೋರಾಟಕ್ಕೆ ಭಾರೀ ಬಲ ಲಭಿಸಿದೆ.
ಬೀದಿಗಳಲ್ಲಿ ದೌರ್ಜನ್ಯ : ತಾಲಿಬಾನ್ ಸರಕಾರ ರಚಿಸಿದ ಅನಂತರ ತಾಲಿಬಾನ್ ಸೈನಿಕರು ದೇಶದ ರಸ್ತೆ, ಬೀದಿಗಳಲ್ಲಿ ಗನ್‌ಗಳಿಂದ ಆಗಾಗ ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ರಸ್ತೆಗಳಲ್ಲೇ ಮಹಿಳೆಯರು, ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆಗೈಯುತ್ತಿದ್ದಾರೆ.
ಅಷ್ಟು ಮಾತ್ರವಲ್ಲದೆ ವಿನಾಕಾರಣ ಥಳಿಸಿ ದೌರ್ಜನ್ಯವೆಸಗುತ್ತಿದ್ದಾರೆ. ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಒಂದಿಷ್ಟು ನಕ್ಕರೆ,
ಜೋರಾಗಿ ಮಾತನಾಡಿದರೂ ಅವರಿಗೆ
ಹೊಡೆದು ಹಿಂಸೆ ನೀಡುವ
ಘಟನೆಗಳು ಸಾಕಷ್ಟು
ವರದಿಯಾಗಿವೆ.
ಭೂಗತ ಶಾಲೆಗಳು! :
ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನಿರ್ಬಂಧಿಸಿದ ಆರಂಭದಲ್ಲಿ ಅಫ್ಘಾನಿಸ್ಥಾನದಲ್ಲಿ ಅಂಡರ್‌ಗ್ರೌಂಡ್‌ಗಳಲ್ಲಿ ಸಣ್ಣ ಸಣ್ಣ ಮನೆಗಳ ಮಾದರಿಯಲ್ಲಿ ಶಾಲೆಗಳು ಆರಂಭಗೊಂಡಿದ್ದವು. ಹೆಣ್ಣುಮಕ್ಕಳು ತಾಲಿಬಾನ್‌ಗಳ ಕಣ್ಣುತಪ್ಪಿಸಿ ಈ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ತಾಲಿಬಾನ್ ಸೈನಿಕರು ಕೇಳಿದಾಗ ಹೊಲಿಗೆ ತರಗತಿಗೆ ಹೋಗುತ್ತಿದ್ದೇವೆ ಎಂದು ಹೇಳಿ, ಪುಸ್ತಕಗಳನ್ನು ಬುರ್ಖಾದಲ್ಲಿ ಅಡಗಿಸಿಕೊಂಡು ಈ ಶಾಲೆಗಳಿಗೆ ಹೋಗುತ್ತಿದ್ದರು.
ಅಫ್ಘಾನಿಸ್ಥಾನದ ಜನಸಂಖ್ಯೆ:
4,11,00,911
(ಜಾಗತಿಕ ಜನಸಂಖ್ಯೆಯ ಶೇ. 0.5)
ಪುರುಷರು:
20.43
ಮಿಲಿಯನ್
ಮಹಿಳೆಯರು:
19.4
ಮಿಲಿಯನ್
ವರ್ಷ ಅಕ್ಷರಸ್ಥರ ಪ್ರಮಾಣ (ಶೇ.)
1979 18.16
2011 31.45
2021 37.27
ಹೆಣ್ಣು ಮಕ್ಕಳಿಗೆ ನಿರ್ಬಂಧಗಳ ಸರಮಾಲೆ :
ಸರಕಾರಿ ಆಡಳಿತದಲ್ಲಿ ಮಹಿಳೆಯರು ಭಾಗವಹಿಸಕೂಡದು
ಹೆಣ್ಣು ಮಕ್ಕಳಿಗೆ ಶಾಲಾ ಶಿಕ್ಷಣ ಹಾಗೂ ಉದ್ಯೋಗದಿಂದ ನಿರ್ಬಂಧ
ಹೆಣ್ಣು ಮಕ್ಕಳು ಹೊರಗಡೆ ಅನಗತ್ಯವಾಗಿ ಓಡಾಡಬಾರದು.
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾಧಾರಣೆ ಕಡ್ಡಾಯ.
ಪುರುಷರೊಂದಿಗೆ ಮಾತ್ರ ದೂರ ಪ್ರಯಾಣ ಮಾಡಬೇಕು.
ಟಿ.ವಿ. ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ,
ಪಾರ್ಕ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಜತೆಯಾಗಿ ಓಡಾಡುವಂತಿಲ್ಲ.
-ವಿಧಾತ್ರಿ ಭಟ್, ಉಪ್ಪುಂದ