ಮುದಗಲ್ಲ: ಹಿಂಗಾರು ಬೆಳೆ ಸೂರ್ಯಕಾಂತಿಗೆ ಕೊರಿಹುಳ ಕಾಣಿಸಿಕೊಂಡ ಪರಿಣಾಮ ರೈತರಲ್ಲಿ ಆತಂಕ ಮನೆ ಮಾಡಿದೆ.
ಹಿಂಗಾರಿ ಹಂಗಾಮಿನಲ್ಲಿ ತಿಂಗಳುಗಟ್ಟಲೆ ಸುರಿದ ಮಳೆಯಿಂದ ವಾತಾವರಣದಲ್ಲಿ ತಂಪೇರಿ ಸೂರ್ಯಕಾಂತಿಗೆ ಹುಳು ಕಾಣಿಸಿಕೊಂಡಿತ್ತು. ಆಗ ಕೀಟಬಾಧೆ ಕಾಟ ಕಡಿಮೆ ಯಾಗಬಹುದು ಎಂದುಕೊಂಡಿದ್ದ ರೈತರಿಗೆ ನೋಡು ನೋಡುತ್ತಲೇ 10- 15 ದಿನದಲ್ಲಿಯೇ ಕೊರಿಹುಳ ಹೊಲ ಪೂರ್ತಿಯಾಗಿ ಸೂರ್ಯಕಾಂತಿ ಗಿಡದ ಎಲೆ ತಿಂದಿವೆ. ಈಗ ಹೂವು ಬಿಡುವ ಸಂದರ್ಭದಲ್ಲಿರುವುದರಿಂದ ಹುಳು ನಿಯಂತ್ರಣಕ್ಕೆ ಯಾವುದೇ ಔಷಧಿ ಸಿಂಪಡಣೆ ಮಾಡಲು ಬರುವುದಿಲ್ಲ ಎಂಬುವುದು ಕೃಷಿ ತಜ್ಞರ ಸಲಹೆ.
ಎಲೆ ಹಿಂಬದಿಯಲ್ಲಿ ಕಾಣುವ ಹುಳು ಮೂರು-ನಾಲ್ಕು ದಿನಗಳಲ್ಲಿಯೇ ಎಲೆಯ ಕಾಂಡತಿಂದು ಬರಿ ಕಟ್ಟಿಗೆ ಉಳಿಸಿವೆ. ಇದರಿಂದ ಸೂರ್ಯಕಾಂತಿ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಹಡಗಲಿ, ಕನ್ನಾಳ, ದೆಸಾಯಿ ಭೋಗಾಪೂರ, ಛತ್ತರ ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ಬಾರಿ ಎಣ್ಣೆ ಬೆಲೆ ಹೆಚ್ಚಳವಾಗಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಒಳ್ಳೆಯ ಬೆಲೆ ಸಿಕ್ಕಿತ್ತು. ಇದನ್ನೆ ನಂಬಿದ ರೈತರು ಸುಮಾರು ಆರುನೂರು ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ತೇವಾಂಶ ಹೆಚ್ಚಳವಾಗಿ ಹೂಳು ಮತ್ತು ರೋಗ ಬಾಧೆಗೆ ಸೂರ್ಯಕಾಂತಿ ತುತ್ತಾಗಿದೆ ಎಂದು ಹಡಗಲಿ ಗ್ರಾಮದ ಹನುಮಂತಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಹಿಂಗಾರಿಗೆ ಸುರಿದ ಅಧಿಕ ಮಳೆಯಿಂದ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಕೀಟ ಉತ್ಪತ್ತಿಗೆ ಕಾರಣವಾಗಿದೆ. ಕೆಲವೆಡೆ ಕೊರಿಹೂಳು ಕಾಣಿಸಿಕೊಂಡ ಪರಿಣಾಮ ಸೂರ್ಯಕಾಂತಿ ಬೆಳೆಹಾಳಾಗಿದೆ.
-ಆಕಾಶ ದಾನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುದಗಲ್ಲ