ಶಾರ್ಜಾ: ಎಎಫ್ ಸಿ ಏಷ್ಯಾ ಕಪ್ ಫುಟ್‌ಬಾಲ್ ಲೀಗ್ ಗುಂಪು “ಎ’ ಹಂತದ ಕೊನೆಯ ಪಂದ್ಯದಲ್ಲಿ ಸೋಮವಾರ ಬಹರೇನ್ ತಂಡವನ್ನು ಭಾರತ ಎದುರಿಸಲಿದೆ. ಮಾಡು ಇಲ್ಲವೆ ಮಡಿ ಪಂದ್ಯ ಇದಾಗಿದ್ದು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಂತ ಅವಶ್ಯಕವಾಗಿದೆ.
“ಎ” ಬಣದಿಂದ ನಡೆಯಲಿರುವ ಗುಂಪು ಹಂತದ ಮತ್ತೂಂದು ಕೊನೆಯ ಪಂದ್ಯದಲ್ಲಿ ಬಲಿಷ್ಠ ಯುಎಇ ತಂಡವನ್ನು ಥಾಯ್ಲೆಂಡ್ ಎದುರಿಸಲಿದೆ.
ಯುಎಇ 2 ಪಂದ್ಯಗಳಿಂದ ಕ್ರಮವಾಗಿ 1 ಗೆಲುವು, 1 ಡ್ರಾದಿಂದ ಒಟ್ಟು 4 ಅಂಕಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು 2 ಪಂದ್ಯ ಆಡಿರುವ ಭಾರತ ಕ್ರಮವಾಗಿ 1 ಪಂದ್ಯದಲ್ಲಿ ಗೆಲುವು, 1 ಪಂದ್ಯದಲ್ಲಿ ಸೋಲು ಅನುಭವಿಸಿ ಒಟ್ಟು 3 ಅಂಕದೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಅಷ್ಟೇ ಪಂದ್ಯವನ್ನು ಆಡಿರುವ ಥಾಯ್ಲೆಂಡ್ ಕೂಡ ಕ್ರಮವಾಗಿ 1 ಗೆಲುವು, 1 ಸೋಲಿನೊಂದಿಗೆ 3 ಅಂಕ ಪಡೆದಿದೆ. ಆದರೆ ಗೋಲಿನ ಅಂತರದಲ್ಲಿ ಪ್ಲಸ್ 1 ಇರುವುದರಿಂದ ಭಾರತ ಥಾಯ್ಲೆಂಡ್‌ಗಿಂತ ಮುಂದಿದೆ.
ಇತ್ತಂಡಗಳ ನಡುವೆ ಈಗ ಮುಂದಿನ ಸುತ್ತಿಗಾಗಿ ತೀವ್ರ ಪೈಪೋಟಿಯಿದೆ. ಎರಡೂ ತಂಡಗಳಿಗೂ ಗೆಲುವು ಅಗತ್ಯವಾಗಿದೆ. ಗೆದ್ದ ತಂಡ ಮುಂದಿನ ಸುತ್ತು ಪ್ರವೇಶಿಸಲಿದೆ. ಸುನೀಲ್ ಚೆಟ್ರಿ, ಲಾಲ್‌ಪೆಕುಲುವಾ ಭಾರತ ತಂಡದ ತಾರಾ ಆಟಗಾರರಾಗಿ ಗಮನ ಸೆಳೆದಿದ್ದಾರೆ. ದುರ್ಬಲ ತಂಡವಾಗಿರುವ ಬಹರೇನ್ 1 ಪಂದ್ಯದಲ್ಲಿ ಡ್ರಾ ಅನುಭವಿಸಲಷ್ಟೇ ಶಕ್ತವಾಗಿದೆ. ಬಹುತೇಕ ಕೂಟದಿಂದ ಹೊರಕ್ಕೆ ಬಿದ್ದಿದೆ.