Advertisement

ಅಪ್ರಯೋಜಕ ಶುದ್ಧ ನೀರಿನ ಘಟಕ!

10:04 AM Jul 20, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಗ್ರಾಮೀಣ ಭಾಗದ ಜನರು ಅಶುದ್ಧ ನೀರು ಕುಡಿಯಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಗ್ರಾಮೀಣ ಭಾಗದಲ್ಲಿ ಶುದ್ಧ ನೀರಿನ ಘಟಕಗಳನ್ನು ಶುರು ಮಾಡುತ್ತಿದೆ. ಆದರೆ ತಾಲೂಕಿನ ಕೆಲವು ಕಡೆಯಲ್ಲಿ ವರ್ಷಗಳೇ ಉರುಳಿದರೂ ಶುದ್ದ ನೀರಿನ ಘಟಕಗಳು ಆರಂಭವಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.

Advertisement

ತಾಲೂಕಿನ 64 ಕಡೆಯಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಅಳ್ಳಗಿ (ಬಿ) ಮತ್ತು ಅತನೂರ ಗ್ರಾಮಗಳಲ್ಲಿ ಮಾತ್ರ ಶುದ್ಧೀಕರಣ ಘಟಕ ನಿರ್ಮಿಸಿ ವರ್ಷಗಳೇ ಉರುಳಿದರೂ ಅವುಗಳು ಕಾರ್ಯಾಚಣೆ ಆರಂಭಿಸಿಲ್ಲ. ಇದರಿಂದ ಈ ಭಾಗದ ಜನರು ಅಶುದ್ಧ ನೀರನ್ನೇ ಕುಡಿಯುವಂತಾಗಿದೆ.

ಲಕ್ಷಾಂತರ ರೂ. ಖರ್ಚಾದರೂ ಸಿಗುತ್ತಿಲ್ಲ ಶುದ್ಧ ನೀರು: ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಆದರೆ ಈ ಘಟಕಗಳು ತಮ್ಮ ಕಾರ್ಯವನ್ನು ಆರಂಭ ಮಾಡುತ್ತಲೇ ಇಲ್ಲ.

ಅಳ್ಳಗಿ (ಬಿ) ಗ್ರಾಮದಲ್ಲಿ 2013-14ನೇ ಸಾಲಿನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ಪುಣೆಯ ವಾಟರ್‌ ಲೈಫ್‌ ಕಂಪನಿಯವರು ಈ ಘಟಕ ನಿರ್ಮಿಸಿದ್ದಾರೆ. ಅತನೂರ ಗ್ರಾಮದಲ್ಲಿಯೂ ವಾಟರ್‌ ಲೈಫ್‌ ಕಂಪನಿಯವರು 2013-14ನೇ ಸಾಲಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಿಸಿದ್ದಾರೆ. ಈ ಎರಡು ಘಟಕಗಳು ತಮ್ಮ ಕಾರ್ಯವನ್ನು ಆರಂಭಿಸಿಯೇ ಇಲ್ಲ.

ಅಶುದ್ಧ ನೀರೇ ಗತಿ: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಶುದ್ಧೀಕರಣ ಘಟಕಗಳು ನೀರು ಪೂರೈಸಲಿವೆ ಎಂದು ನಂಬಿದ್ದ ಜನರಿಗೆ ನಿರಾಶೆಯಾಗಿದೆ. ಅಲ್ಲದೆ ಅಶುದ್ಧ ನೀರು ಕುಡಿದು ದಿನ ಕಳೆಯುವುದು ತಪ್ಪದಂತಾಗಿದೆ.

Advertisement

ಅತನೂರ, ಅಳ್ಳಗಿ ಘಟಕ ಆರಂಭಕ್ಕೆ ಒತ್ತಾಯ: ವರ್ಷಗಳಿಂದ ನೀರು ಶುದ್ಧೀಕರಣ ಘಟಕ ಆರಂಭವಾಗದೆ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಶುದ್ಧೀಕರಣ ಘಟಕದ ಒಳಗಡೆ ಇರುವ ಯಂತ್ರಗಳು ಕಳ್ಳತನವಾಗಿವೆ. ಇದರ ಬಗ್ಗೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಅಳ್ಳಗಿ (ಬಿ) ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅತನೂರ ಗ್ರಾಮದಲ್ಲಿ ಶುದ್ಧೀಕರಣ ಘಟಕಕ್ಕೆ ಮುಳ್ಳುಕಂಟಿ ಹಚ್ಚಲಾಗಿದೆ. ಅದನ್ನು ತೆರವುಗೊಳಿಸಿ ಶುದ್ಧೀಕರಣ ಘಟಕ ಆರಂಭಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಅಳ್ಳಗಿ (ಬಿ), ಅತನೂರ ಶುದ್ಧೀಕರಣ ಘಟಕಗಳು ಸ್ಥಗಿತಗೊಂಡ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರವೇ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸಲಾಗುವುದು.
ಲಿಯಾಕತ್‌ ಅಲಿ, ಎಇಇ,
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next