ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಅನೇಕ ಕಡೆಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳಿಗೆ ತಡೆಗೋಡೆ ಇಲ್ಲದ್ದರಿಂದ ವಾಹನ ಸವಾರರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ.
ಮಣೂರ, ಭೂಂಯಾರ್ ಬ್ಯಾರೇಜ್: ತಾಲೂಕಿನ ಮಣೂರ ಗ್ರಾಮದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭೂಂಯಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಆದಾಗಿನಿಂದ ತಡೆಗೋಡೆಯನ್ನೇ ನಿರ್ಮಿಸಿಲ್ಲ. ಹೀಗಾಗಿ ಇಲ್ಲಿ ನಿತ್ಯ ಓಡಾಡುವ ನೂರಾರು ವಾಹನ ಸವಾರರಿಗೆ ಜೀವ ಭಯ ಕಾಡುತ್ತಿದೆ. ಇಷ್ಟು ದಿನ ನದಿ ನೀರಿಲ್ಲದೇ ಖಾಲಿಯಾಗಿತ್ತು. ಈ ವೇಳೆ ಯಾವುದೇ ಅಂಜಿಕೆ ಇಲ್ಲದೇ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರಿಗೆ ಈಗ ಭಯ ಶುರುವಾಗಿದೆ. ನದಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಬ್ಯಾರೇಜ್ ಮೇಲಿನ ರಸ್ತೆಯಲ್ಲಿ ಸಂಚಾರ ಮಾಡುವಾಗ ಅಂಜಿಕೆ ಬಂದಂತಾಗುತ್ತದೆ. ದೊಡ್ಡ ವಾಹನಗಳು ಎದುರಾದಾಗ ಪಕ್ಕಕ್ಕೆ ಸರಿದು ನಿಲ್ಲಲು ಬ್ಯಾರೇಜ್ ಮೇಲೆ ಜಾಗವಿಲ್ಲ. ಹೀಗಾಗಿ ಇಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಆತಂಕವೇ ಹೆಚ್ಚು.
ಘತ್ತರಗಿಯಲ್ಲಿ ತಡೆಗೋಡೆ ಬಿದ್ದಿದೆ: ಒಂದು ಕಡೆ ತಡೆಗೋಡೆ ಇಲ್ಲವಾದರೆ, ಇನ್ನೊಂದು ಕಡೆ ತಡೆಗೋಡೆ ಬಿದ್ದರೂ ನೋಡವವರು ಇಲ್ಲದಂತಾಗಿದೆ. ಘತ್ತರಗಿಯಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ನದಿ ಉಕ್ಕಿ ಹರಿದಿತ್ತು. ನದಿ ಪ್ರವಾಹಕ್ಕೆ ಬ್ಯಾರೇಜ್ ಮೇಲಿಂದ ನೀರು ಹರಿದಿತ್ತು. ನೀರಿನ ರಭಸಕ್ಕೆ ಬ್ಯಾರೇಜ್ ಮೇಲಿನ ತಡೆಗೋಡೆ ಅಲ್ಲಲ್ಲಿ ಮುರಿದು ಬಿದ್ದಿವೆ. ಮುರಿದು ಬಿದ್ದ ತಡೆಗೋಡೆ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಮನಸ್ಸು ಮಾಡಬೇಕಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು, ಸಂಬಂಧಪಟ್ಟವರು ಕೂಡಲೇ ಇದನ್ನು ಸರಿಪಡಿಸುವ ಕೆಲಸ ಮಾಡಬೇಕಾಗಿದೆ.
ವಾಹನ ಸವಾರರಿಗೆ ಸಂಚಕಾರ: ಭೀಮಾ ನದಿಗೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳೀಗ ವಾಹನ ಸವಾರರಿಗೆ ಸಂಚಕಾರ ತಂದೊಡ್ಡಿವೆ. ಸಣ್ಣ ವಾಹನಗಳು ಹೇಗೋ ತೆವಳಿಕೊಂಡು ಹೋಗುತ್ತಿವೆ. ಆದರೆ ದೊಡ್ಡ ಗಾತ್ರದ ವಾಹನಗಳು ಎದುರು-ಬದುರಾದಾಗ ಸಮಸ್ಯೆ ಆಗುತ್ತಿದೆ. ಅಲ್ಲದೇ ತಡೆ ಗೋಡೆ ಇಲ್ಲದ್ದರಿಂದ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ ಎದುರಾಗುವ ಸಾದ್ಯತೆ ಇದೆ. ಹೀಗಾಗಿ ಸಂಬಂಧ ಪಟ್ಟವರು ಕೂಡಲೇ ಜಾಗೃತಾಗಿ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದರೇ ಅನಾಹುತಗಳಾಗುವ ಸಾಧ್ಯತೆ ಹೆಚ್ಚಾಗಿದೆ.