Advertisement

ಏರೋನಿಕ್ಸ್‌ ಎಂಡಿ, ಸಿಇಒ ಹಂತಕರ ಸೆರೆ

09:49 AM Jul 13, 2023 | Team Udayavani |

ಬೆಂಗಳೂರು: ನಗರದ ಏರೋನಿಕ್ಸ್‌ ಮೀಡಿಯಾ ಪ್ರೈ.ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಫ‌ಣೀಂದ್ರ ಸುಬ್ರಹ್ಮಣ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನು ಕುಮಾರ್‌ ಬರ್ಬರವಾಗಿ ಹತ್ಯೆ ಮಾಡಿದ ಮೂವರು ಹಂತಕರು ಖಾಕಿ ಬಲೆಗೆ ಬಿದ್ದಿದ್ದಾರೆ.

Advertisement

ಎದುರಾಳಿಗಳ ಉದ್ಯಮದ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜತೆಗೆ ಆರೋಪಿಯನ್ನು ಕೆಲಸ ದಿಂದ ವಜಾಗೊಳಿಸಿರುವುದು ಹಾಗೂ ಯುವತಿ ವಿಚಾರಕ್ಕಾಗಿ ಕೃತ್ಯ ಎಸಗಿರುವ ಆರೋಪವೂ ಇದೆ.

ಶಿವಮೊಗ್ಗ ಮೂಲದ ಬನ್ನೇರುಘಟ್ಟ ರಸ್ತೆಯ ಚಿಕ್ಕನಹಳ್ಳಿಯ ನಿವಾಸಿ ಶಬರೀಶ್‌ ಅಲಿಯಾಸ್‌ ಫೆಲೆಕ್ಸ್‌ (27), ರೂಪೇನ ಅಗ್ರಹಾರದ ವಿನಯ್‌ ರೆಡ್ಡಿ (23), ಮಾರೇನಹಳ್ಳಿಯ ಸಂತೋಷ್‌ ಅಲಿಯಾಸ್‌ ಸಂತು (26) ಬಂಧಿತರು. ದೇಶ್ಪಾಲ್‌ ಕಂಪನಿ ಮುಖ್ಯಸ್ಥ ಅರುಣ್‌ ಕುಮಾರ್‌ ಅನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಕೃತ್ಯದಲ್ಲಿ ಅರುಣ್‌ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಏರೋನಿಕ್ಸ್‌ ಮೀಡಿಯಾ ಪ್ರೈ.ಲಿ. ಕಂಪನಿಯ ಸೀನಿಯರ್‌ ಸೇಲ್ಸ್‌ ಮ್ಯಾನೇಜರ್‌ ಶಂಕರನಾರಾಯಣ ಕೊಟ್ಟ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಠಾಣೆ ಪೊಲೀಸರು ಈ ನಾಲ್ವರು ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎದುರಾಳಿ ಕಂಪನಿ ಮಾಲೀಕನ ಕೈವಾಡ?: ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರೋಪಿ ಅರುಣ್‌ ಕುಮಾರ್‌ ಒಡೆತನದ ದೇಶ್ಪಾಲ್‌ ನೆಟ್‌ ವರ್ಕ್‌ಪ್ರೈ.ಲಿ. (ಜಿ-ನೇಟ್‌) ಕಂಪನಿಯಲ್ಲೇಆರೋಪಿ ಗಳು ಹಾಗೂ ಕೊಲೆಯಾಗಿರುವ ಫ‌ಣೀಂದ್ರ, ವಿನು ಕುಮಾರ್‌ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಫ‌ಣೀಂದ್ರ, ವಿನುಕುಮಾರ್‌ ಕೆಲಸಕ್ಕೆ ರಾಜಿನಾಮೆ ಕೊಟ್ಟು ಏರೋನಿಕ್ಸ್‌ ಮೀಡಿಯಾ ಪ್ರೈ.ಲಿ, ಕಂಪನಿ ಪ್ರಾರಂಭಿಸಿದ್ದರು. ಜಿ-ನೇಟ್‌ ಕಂಪನಿಯ 10 ನೌಕರರು ಏರೋನಿಕ್ಸ್‌ ಮೀಡಿಯಾ ಪ್ರೈ.ಲಿ ಕಂಪನಿಗೆ ಸೇರಿಕೊಂಡಿದ್ದರು. ಕಂಪನಿ ಉದ್ಯಮ ಚೆನ್ನಾಗಿ ನಡೆಯುತಿತ್ತು. ಫ‌ಣೀಂದ್ರ ಹೊಸ ಕಂಪನಿ ತೆರೆದ ಬಳಿಕ ದೇಶ್ಪಾಲ್ ನೆಟ್‌ ವರ್ಕ್‌ ಪ್ರೈ.ಲಿ. ಕಂಪನಿ ಬಿಸಿನೆಸ್‌ಗೆ ಪೆಟ್ಟು ಬಿದ್ದಿತ್ತು. ಇದರಿಂದ ಕಂಪನಿ ಮಾಲೀಕ ಅರುಣ್‌ ಕುಮಾರ್‌ ಅವರು ಫ‌ಣೀಂದ್ರ ಸುಬ್ರಮಣ್ಯ, ವಿನು ಕುಮಾರ್‌ ಮೇಲೆ ದ್ವೇಷ ಕಾರುತ್ತಿದ್ದರು.

Advertisement

ಇದೇ ದ್ವೇಷದಿಂದ ದೇಶ್ಪಾಲ್‌ ನೆಟ್‌ ವರ್ಕ್‌ ಕಂಪನಿಯ ಕೆಲಸಗಾರನಾಗಿದ್ದ ಫೆಲಿಕ್ಸ್‌ಗೆ ಇವರನ್ನು ಕೊಲೆ ಮಾಡುವಂತೆ ಅರುಣ್‌ ಪ್ರೇರೇಪಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದಲ್ಲದೇ ಜಿ-ನೇಟ್‌ ಖಾಸಗಿ ಕಂಪನಿಯಲ್ಲಿ ಫ‌ಣೀಂದ್ರ ಎಚ್‌ಆರ್‌ ಆಗಿದ್ದ ವೇಳೆ ಫೆಲಿಕ್ಸ್‌ ಕೆಲಸ ಮಾಡುವುದು ಬಿಟ್ಟು ರೀಲ್ಸ್, ಹರಟೆ ಹೊಡೆಯುತ್ತಾ ಸಮಯ ವ್ಯರ್ಥಮಾಡುತ್ತಿದ್ದ. ಈ ಕಾರಣದಿಂದ ಪಣೀಂದ್ರ ಜಿನೆಟ್‌ ಕಂಪನಿ ಯಿಂದ ಫೆಲಿಕ್ಸ್‌ನನ್ನು ಹೊರ ಹಾಕಿದ್ದ. ಈ ಘಟನೆಯ ಬಳಿಕ ಫ‌ಣೀಂದ್ರನ ಮೇಲೆ ಆರೋಪಿ ದ್ವೇಷ ಸಾಧಿಸುತ್ತಿದ್ದ. ಈ ವಿಚಾರ ಅರುಣ್‌ಗೂ ಗೊತ್ತಿತ್ತು. ಫ‌ಣೀಂದ್ರ ಕೆಲಸ ಬಿಟ್ಟ ಬೆನ್ನಲ್ಲೇ ಫೆಲಿಕ್ಸ್‌ ಮತ್ತೆ ಅರುಣ್‌ ಕಂಪನಿಗೆ ಸೇರಿದ್ದ.

ಹತ್ಯೆಗೂ ಮುನ್ನ ಮದ್ಯ ಸೇವನೆ: ಫ‌ಣಿಂದ್ರನನ್ನ ಮುಗಿಸಲು ಕಳೆದ 4 ತಿಂಗಳಿನಿಂದ ಹಂತಕರು ಸ್ಕೆಚ್‌ ಹಾಕಿದ್ದರೂ ಭಯದಿಂದ ಸುಮ್ಮನಾಗಿದ್ದರು. ಮಂಗಳವಾರ ಕೊಲೆಗೆ ಮುನ್ನ ಭಯಪಡಬಾರದು ಎಂಬ ಕಾರಣಕ್ಕೆ ಸ್ನೇಹಿತರಾದ ಸಂತೋಷ್‌, ವಿನಯ್‌ ಜತೆಗೆ ಸಿಲ್ಕ್‌ ಬೋರ್ಡ್‌ಗೆ ಫೆಲಿಕ್ಸ್‌ ತೆರಳಿದ್ದ. ಅಲ್ಲಿ ಮೂವರು ಸಹ ಮದ್ಯಸೇವಿಸಿ ಪಣೀಂದ್ರ ಹತ್ಯೆಗೆ ಸಂಚು ರೂಪಿಸಿದ್ದರು.

ವಿನುಕುಮಾರ್‌ ಹತ್ಯೆ ಅನಿರೀಕ್ಷಿತ: ಜು.11ರಂದು 3.30ರಲ್ಲಿ ಏರೋನಿಕ್ಸ್‌ ಮೀಡಿಯಾ ಕಂಪನಿಗೆ ಆರೋಪಿ ಫೆಲಿಕ್ಸ್‌ ತನ್ನ ಇಬ್ಬರು ಸಹಚರರ ಜತೆಗೆ ಬಂದು ಸ್ವಲ್ಪ ಹೊತ್ತು ಫ‌ಣೀಂದ್ರ ಜತೆ ಮಾತನಾಡಿದ್ದ. ಬಳಿಕ ಮಾರಕಾಸ್ತ್ರಗಳಿಂದ ಫ‌ಣೀಂದ್ರ ಅವರ ತಲೆ ಮತ್ತು ದೇಹದ ಇತರೆ ಭಾಗಗಳಿಗೆ ಹಲ್ಲೆ ನಡೆಸಿದರೆ, ಆತನ ಸಹಚರರು ಫ‌ಣೀಂದ್ರ ದೇಹಕ್ಕೆ ಚೂರಿಯಿಂದ ಇರಿದಿದ್ದರು. ಆರೋಪಿಗಳು ವಿನು ಕುಮಾರ್‌ ಅವರನ್ನು ಕೊಲೆ ಮಾಡುವ ಉದ್ದೇಶ ಹೊಂದಿರ ಲಿಲ್ಲ. ಫ‌ಣೀಂದ್ರ ರಕ್ಷಣೆಗೆ ಧಾವಿಸಿದಾಗ ಆರೋಪಿಗಳ ಮೇಲೆ ಕಚೇರಿಯಲ್ಲಿದ್ದ ಕುರ್ಚಿಗಳನ್ನು ಎಸೆದು ಅಲ್ಲಿಂದ ಆರೋಪಿಗಳನ್ನು ಓಡಿಸಲು ಮುಂದಾಗಿದ್ದು, ವಿನು ಕುಮಾರ್‌ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಫ‌ಣೀಂದ್ರನಿಗೆ ಎಚ್ಚರಿಕೆ ಕೊಟ್ಟಿದ್ದ ಅರುಣ್‌ : ಅರುಣ್‌ ಕುಮಾರ್‌ ಹಲವು ಬಾರಿ ಫ‌ಣೀಂದ್ರ ಹಾಗೂ ಆತನ ತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದ. ಫ‌ಣೀಂದ್ರ ಸಹೋದರನಿಗೂ ಕರೆ ಮಾಡಿ ಫ‌ಣೀಂದ್ರನಿಗೆ ಬುದ್ಧಿ ಹೇಳದಿದ್ದರೆ ಡೇಂಜರ್‌ ಕಾದಿದೆ ಎಂದು ಬೆದರಿಸಿದ್ದ. ಅಲ್ಲದೆ, ನನ್ನ ಬಳಿ ಹುಡುಗರಿದ್ದಾರೆ ಏನಾದರೂ ಆದರೆ ನನಗೆ ಕೇಳಬೇಡಿ. ನನ್ನ ಗ್ರಾಹಕರನ್ನು ಕರೆದುಕೊಂಡು ಮೆರೆಯುತ್ತಿದ್ದೀಯಾ ಎಂದು ಎಚ್ಚರಿಸಿದ್ದ. ಉದ್ಯಮದಲ್ಲಿ ಎದುರಾಳಿಗಳಿರುವುದು ಸಾಮಾನ್ಯ ಎಂದು ಫ‌ಣಿಂದ್ರ ಸುಮ್ಮನಾಗಿದ್ದರು. ಈ ವಿಚಾರ ಫೆಲಿಕ್ಸ್‌ ಕಿವಿಗೆ ಬಿದ್ದು ಅರುಣ್‌ ಬಳಿ ಫ‌ಣೀಂದ್ರನ ಬಗ್ಗೆ ತಾನೂ ದ್ವೇಷ ಸಾಧಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಇದೇ ಸಮಯಕ್ಕೆ ಕಾಯುತ್ತಿದ್ದ ಅರುಣ್‌ ಸಹ ಫೆಲಿಕ್ಸ್‌ಗೆ ಬೆಂಬಲ ಸೂಚಿಸಿದ್ದ. ಕೊಲೆ ಮಾಡಲು ಫ‌ಣಿಂದ್ರ ಅವರ ಕಚೇರಿಯೊಳಗೆ ಪ್ರವೇಶ ಪಡೆಯುವ ಉದ್ದೇಶದಿಂದ “ನಾನು ಜಿ-ನೆಟ್‌ನಲ್ಲಿ ಕೆಲಸ ಬಿಟ್ಟು ನಿಮ್ಮ ಕಂಪನಿಯಲ್ಲಿ ಕೆಲಸ ಮಾಡಬೇಕೆಂದಿದ್ದೇನೆ. ಈ ಬಗ್ಗೆ ನಿಮ್ಮ ಬಳಿ ಕಚೇರಿಗೆ ಬಂದು ಮಾತನಾಡುತ್ತೇನೆ’ ಎಂದು ಫೆಲಿಕ್ಸ್‌ ತಿಳಿಸಿದ್ದ. ಫ‌ಣೀಂದ್ರ ಕಚೇರಿಗೆ ಬರುವಂತೆ ಹೇಳಿದ್ದರು. ಈ ನೆಪದಲ್ಲಿ ತನ್ನಿಬ್ಬರು ಸಹಚರರ ಜೊತೆಗೆ ಕಚೇರಿಗೆ ಎಂಟ್ರಿ ಕೊಟ್ಟಿದ್ದ. ಹತ್ಯೆ ನಡೆಸಿ ಕುಣಿಗಲ್‌ನಲ್ಲಿದ್ದು ಮರುದಿನ ಕೋರ್ಟ್‌ಗೆ ಶರಣಾಗಿ ಕೆಲ ದಿನಗಳಲ್ಲೇ ಜಾಮೀನಿನ ಮೇಲೆ ಹೊರ ಬರುವ ಯೋಜನೆ ಹಾಕಿಕೊಂಡಿದ್ದರು. ಇದಕ್ಕೆ ಅರುಣ್‌ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದ ಎಂದು ಹಂತಕರ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ತನಿಖೆ ದಿಕ್ಕು ತಪ್ಪಿಸಲು ಹುಡುಗಿ ಪ್ರಕರಣ ಸೃಷ್ಟಿ ?: ಕಚೇರಿಯಲ್ಲಿರುವ ಹುಡುಗಿಯೊಬ್ಬಳ ಜತೆಗೆ ಸಲುಗೆಯಿಂದ ಇದ್ದೆ. ಫ‌ಣೀಂದ್ರ ಅವರೂ ಆಕೆಯ ಜತೆಗೆ ಸಲುಗೆ ಬೆಳೆಸಿಕೊಂಡಿದ್ದರು. ಇದರಿಂದ ಆಕೆಗೆ ತೊಂದರೆ ಉಂಟಾಗಿತ್ತು. ಇದನ್ನು ಸಹಿಸದೇ ಕೊಲೆ ಮಾಡಿರುವುದಾಗಿ ತನಿಖೆ ದಿಕ್ಕು ತಪ್ಪಿಸಲು ವಿಚಾರಣೆ ವೇಳೆ ಫೆಲಿಕ್ಸ್‌ ಸುಳ್ಳು ಹೇಳಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಇತ್ತ ಪೊಲೀಸರು ತಮ್ಮದೇ ಶೈಲಿಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಸತ್ಯಾಂಶ ಹೊರ ಬರುತ್ತಿದೆ.

ಮೈ ತುಂಬಾ ಟ್ಯಾಟೋ : 7ನೇ ತರಗತಿ ಓದಿದ್ದ ಫೆಲಿಕ್ಸ್‌ ಮುಖ ಹಾಗೂ ಮೈ ತುಂಬಾ ಟ್ಯಾಟೂ ಹಾಕಿಸಿ ಕೊಂಡಿದ್ದಾನೆ. ಮೈ ಮೇಲೆ ಹಾಲಿವುಡ್‌ನ‌ ಜೋಕರ್‌ ಖಳನಾಯಕನಂತೆ ಬಿಳಿ ಬಣ್ಣ ಬಳಿದುಕೊಂಡು ಅದರ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ. ಸ್ಮಶಾನದಲ್ಲಿ ಯುವತಿಯೊಬ್ಬಳಿಗೆ ತಾಳಿ ಕಟ್ಟಿ ವಿವಾಹವಾಗಿದ್ದ. ರ್ಯಾಪ್‌ ಸಾಂಗರ್‌ ಎಂದು ಬಿಂಬಿಸಿಕೊಳ್ಳುತ್ತಿದ್ದ. ಕತ್ತಿಗೆ ನಕಲಿ ಚಿನ್ನದ ಸರ ಹಾಕಿಕೊಂಡು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದ. ‌

ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ ? : ಹತ್ಯೆ ಬಳಿಕ ಮೂವರು ಹಂತಕರೂ ಕಚೇರಿಯ ಹಿಂಭಾಗದ ಕಂಪೌಂಡ್‌ ಜಿಗಿದು ಕ್ಯಾಬ್‌ ಮೂಲಕ ಮೆಜೆಸ್ಟಿಕ್‌ಗೆ ತೆರಳಿದ್ದರು. ನಂತರ ಅಲ್ಲಿಂದ ರೈಲು ಮುಖಾಂತರ ಕುಣಿಗಲ್‌ಗೆ ಹೋಗಿದ್ದರು. ಇತ್ತ ಖಾಕಿ ಪಡೆ ವಿಶೇಷ ಐದು ತಂಡ ರಚಿಸಿ ಟವರ್‌ ಡಂಪ್‌ ಮೂಲಕ ಆರೋಪಿಗಳಿಗೆ ಶೋಧಿಸಿದಾಗ ಕುಣಿಗಲ್‌ ಬಳಿ ಆರೋಪಿಗಳು ಓಡಾಡುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ಕುಣಿಗಲ್‌ಗೆ ತೆರಳಿದ ಅಮೃತಹಳ್ಳಿ ಠಾಣೆ ಪೊಲೀಸರು ಕೃತ್ಯ ನಡೆದ 4 ತಾಸಿನೊಳಗೆ ಮೂವರನ್ನೂ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next