ಬೆಂಗಳೂರು: ಸಮಾಜ ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ದಕ್ಷತೆಯಿಂದ ಕೆಲಸ ಮಾಡುವಂತೆ ರಾಜ್ಯದ ಲೋಕಾಯುಕ್ತ ಪೊಲೀಸರಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸಲಹೆ ನೀಡಿದರು.
ನಗರದ ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಪೊಲೀಸರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಒಳಗಿನ ಸನ್ನಿವೇಶ, ಬದಲಾವಣೆ, ಜನರ ಮೇಲಾಗುತ್ತಿರುವ ದೌರ್ಜನ್ಯ ಇತ್ಯಾದಿ ವಿಷಯದ ಬಗ್ಗೆ ಪೊಲೀಸರಿಗೆ ನಿಗಾ ಇರಬೇಕು. ಲೋಕಾಯುಕ್ತ ಪೊಲೀಸರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜನಸಾಮಾನ್ಯರಿಗೆ ಗುಣಮಟ್ಟದ ಸೇವೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಪೊಲೀಸ್ ಹಾಗೂ ಸೈನ್ಯ ಬಹಳ ಅಗತ್ಯವಾಗಿದೆ. ಸೈನಿಕರು ಗಡಿಯಲ್ಲಿದ್ದು, ದೇಶದ ರಕ್ಷಣೆ ಮಾಡುತ್ತಾರೆ. ದೇಶಕ್ಕೆ ಎದುರಾಗುವ ಬಾಹ್ಯ ಸಮಸ್ಯೆಯ ವಿರುದ್ಧ ಸೈನಿಕರು ಹೋರಾಟ ಮಾಡುತ್ತಾರೆ. ಪೊಲೀಸರು ಜನರ ಮಧ್ಯೆ ಇದ್ದು, ಅವರಿಗೆ ಆಗುತ್ತಿರುವ ಶೋಷಣೆ, ದೌರ್ಜನ್ಯ ಹಾಗೂ ಲಂಚಾವತಾರದ ವಿರುದ್ಧ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಪೊಲೀಸರು ಜ್ಞಾನದ ಅಪ್‌ಗೆಡ್ ಮಾಡಿಕೊಳ್ಳುತ್ತಿರಬೇಕು. ಸಮಗ್ರತೆಯ ದೃಷ್ಟಿಕೋನದಲ್ಲಿ ಸೇವೆ ಸಲ್ಲಿಸಬೇಕು. ಸಂಕುಚಿತ ಮನೋಭಾವ ಬೆಳೆಸಿಕೊಳ್ಳಬಾರದು. ಸ್ವತಂತ್ರವಾಗಿ ಸೇವೆ ಸಲ್ಲಿಸುವ ಬದ್ಧತೆಯೂ ಇರಬೇಕು. ಲೋಕಾಯುಕ್ತ ಪೊಲೀಸರ ಮೇಲೆ ಸಮಾಜದ ನಿರೀಕ್ಷೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಸೇವೆ ಸಲ್ಲಿಸಿ ಎಂದರು.
ಲೋಕಾಯುಕ್ತ ಎಡಿಜಿಪಿ ಸಂಜಯ್ ಸಹಾಯ್ ಮಾತನಾಡಿ, ಭ್ರಷ್ಟಾಚಾರ ವಿರೋಧಿಸಿ, ಜನಲೋಕ್‌ಪಾಲ್ ಮಸೂದೆ ಜಾರಿಗಾಗಿ ಅಣ್ಣಾ ಹಜಾರೆ ದೊಡ್ಡ ಮಟ್ಟದ ಹೋರಾಟ ಮಾಡಿದರೂ, ನಿರೀಕ್ಷಿತ ಮಟ್ಟದಲ್ಲಿ ಸಫಲತೆ ಕಂಡಿಲ್ಲ. ನಮ್ಮ ಸಮಾಜ ಮತ್ತು ಜನರ ಡಿಎನ್‌ಎನಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಿದೆ. ಹೀಗಾಗಿ ಪೊಲೀಸರಾದ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇರಬೇಕು. ಭ್ರಷ್ಟಾಚಾರದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸೇವೆ ಸಾಗಬೇಕು ಎಂದು ಹೇಳಿದರು.
ಸಮಾಜದ ಉನ್ನತಿಗಾಗಿ ಬದಲಾವಣೆ ತರಲು ಮುಂದಾಗಬೇಕು. ನಮ್ಮ ಬದ್ಧತೆ, ಸಮಗ್ರತೆ ಹಾಗೂ ವರ್ತನೆ ಸಮಾಜ ಮುಖೀಯಾಗಿದ್ದು, ದೇಶಕ್ಕಾಗಿ ಬದುಕುವ ಮಾನಸಿಕತೆ ಹೊಂದಿರಬೇಕು ಎಂಬ ಸಲಹೆ ನೀಡಿದರು. ನಿವೃತ್ತ ನ್ಯಾ.ವಿ ಜಗನ್ನಾಥ್, ಉಪಲೋಕಾಯುಕ್ತರಾದ ನ್ಯಾ. ಸುಭಾಷ್ ಬಿ.ಅಡಿ, ಎನ್.ಆನಂದ್, ಲೋಕಾಯುಕ್ತ ರಿಜಿಸ್ಟ್ರಾರ್ ನಂಜುಂಡಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.