ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಸ್ವ ಪ್ರತಿಷ್ಠೆಯನ್ನು ಬದಿಗಿರಿಸಿ ಸಿಇಟಿ-2021ನೇ ಸಾಲಿನ ಪುನರಾವರ್ತಿತ ವಿದ್ಯಾರ್ಥಿಗಳನ್ನು ರ್‍ಯಾಂಕ್ ಪಟ್ಟಿಯಲ್ಲಿ ಪರಿಗಣಿಸಬೇಕೆಂದು ಸಿಇಟಿ ಕೇಂದ್ರದ ಮಾಜಿ ಅಧ್ಯಕ್ಷ ಬಲವೀರ ರೆಡ್ಡಿ ಸಲಹೆ ನೀಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ಫಲಿತಾಂಶ ಪ್ರಕಟವಾಗಿ 38 ದಿನಗಳಾಗಿವೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ರ್‍ಯಾಂಕ್ ನೀಡುವ ವಿಚಾರವಾಗಿ ಸರಕಾರವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದರಿಂದ ಆಕಾಂಕ್ಷಿಗಳಿಗೆ ಒಂದು ವರ್ಷದ ಶೈಕ್ಷಣಿಕ ವರ್ಷ ವ್ಯರ್ಥವಾಗಲಿದೆ ಎಂದರು.
ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಅನಂತರ ಸುಪ್ರೀಂಕೋರ್ಟ್ ಹೀಗೆ ವಿಚಾರಣೆ ಮುಂದುವರಿದರೆ ಸಮಯ ವ್ಯರ್ಥವಾಗಲಿದೆ. ಆದ್ದರಿಂದ ಸದ್ಯ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕೊರೊನಾ ಸಮಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರವೇ ಪರೀಕ್ಷೆ ನಡೆಸುವುದಿಲ್ಲವೆಂದು ಹೇಳಿದೆ ಮತ್ತು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕದ ಆಧಾರದಲ್ಲಿ ದ್ವಿತೀಯ ಪಿಯುಸಿ ಅಂಕಪಟ್ಟಿ ನೀಡಿದೆ. ಈಗ ಸರಕಾರವೇ ಆ ಅಂಕಪಟ್ಟಿಯನ್ನು ಒಪ್ಪುವುದಿಲ್ಲವೆಂದಾದರೆ, ಮುಂದಿನ ದಿನಗಳಲ್ಲಿ ವೃತ್ತಿಪರ ಕೋರ್ಸ್ ಮುಗಿಸಿ ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಗಳು ಉದ್ಯೋಗ ನೀಡದಿದ್ದರೆ ಪರಿಸ್ಥಿತಿ ಏನಾದೀತು ಎಂದು ಪ್ರಶ್ನಿಸಿದರು.
ಪುನರಾವರ್ತಿತ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತಿರುವ ಗಿರೀಶ್ ಡಿ. ಕುಲಕರ್ಣಿ, ರತ್ನಾ ಗೌಡ, ರಾಜೇಂದ್ರ ಉಪಸ್ಥಿತರಿದ್ದರು.