ಹಾವೇರಿ: ಈ ಬಾರಿ ರಾಜ್ಯಕ್ಕೆ ವಿತರಣೆಯಾಗಿರುವ ಸೋಯಾಬಿನ್ ಬಿತ್ತನೆ ಬೀಜದಲ್ಲಿ ಮೊಳಕೆ ಬರಿಸುವ ಸಾಮರ್ಥ್ಯ ಕಡಿಮೆಯಿದ್ದು ರೈತರು ಈ ವರ್ಷ ಸೋಯಾಬೀನ್ ಬಿಟ್ಟು ಬೇರೆ ಬೆಳೆ ಬೆಳೆಯುವುದು ಸೂಕ್ತ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸಲಹೆ ನೀಡಿದ್ದಾರೆ.
ಡಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಸಲಹೆ ನೀಡಿದರು. ರಾಜ್ಯಕ್ಕೆ ಸೋಯಾಬೀನ್ ಬೀಜ ಉತ್ಪಾದಿಸಿ ಪೂರೈಸುವ ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಳೆದ ವರ್ಷ ಸೋಯಾ ಬಿತ್ತನೆ ಬೀಜ ಕೊಯ್ಲು ವೇಳೆ ನೆರೆ ಬಂದಿದ್ದರಿಂದ ಸೋಯಾಬಿನ್ ಬೀಜದ ಮೊಳಕೆ ಬರಿಸುವ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ರೈತರು ಈ ವರ್ಷ ಸೋಯಾ ಬಿತ್ತನೆ ಕೈಬಿಡುವುದು ಒಳಿತು ಎಂದರು.
ವಿವಿಧ ಕಂಪನಿಗಳು ಈಗಾಗಲೇ ರಾಜ್ಯಕ್ಕೆ 1.30ಲಕ್ಷ ಕ್ವಿಂಟಾಲ್ ಸೋಯಾಬಿತ್ತನೆ ಬೀಜ ಪೂರೈಸಿವೆ. ಈ ಮೊದಲು ಕೇಂದ್ರ ಸರ್ಕಾರ ಮೊಳಕೆಬರಿಸುವ ಸಾಮರ್ಥ್ಯವನ್ನು ಶೇ. 65 ನಿಗದಿಪಡಿಸಿತ್ತು. ಈಗ ಅದನ್ನು ಶೇ. 60ಕ್ಕೆ ಇಳಿಸಿದೆ. ಕೆಲವು ಕಡೆ ಬೀಜ ಉತ್ತಮವಾಗಿ ಮೊಳಕೆಯೊಡೆದಿದ್ದರೆ ಇನ್ನು ಕೆಲವು ಕಡೆ ಮೊಳಕೆಯೊಡೆದಿಲ್ಲ. ಆದ್ದರಿಂದ ರೈತರು ಈ ಬಾರಿ ಬೇರೆ ಬೆಳೆ ಬೆಳೆಯುವುದು ಸೂಕ್ತ ಎಂದರು.
ಇಂದು ಸಭೆ: ರಾಜ್ಯದಲ್ಲಿ ಈಗಾಗಲೇ ಅಂದಾಜು 2700ಕ್ವಿಂಟಾಲ್‌ನಷ್ಟು ಸೋಯಾಬೀನ್ ಬೀಜ ವಿತರಣೆಯಾಗಿದ್ದು ಇದರಲ್ಲಿ 2498ಕ್ವಿಂಟಾಲ್ ಬೀಜ ಮೊಳಕೆಬರಿಸುವ ಸಾಮರ್ಥ್ಯ ಕಡಿಮೆಯಾಗಿರುವುದು ಗೊತ್ತಾಗಿದೆ. ಇದರಿಂದ 8592ಹೆಕ್ಟೆರ್‌ನಲ್ಲಿ
ಬಿತ್ತನೆ ಮಾಡಿದ 9695 ರೈತರಿಗೆ ನಷ್ಟವಾಗಿದೆ. ಈಗಾಗಲೇ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರಿಗೆ ಕಂಪನಿಗಳ ಕಡೆಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಾನಿಗೆ ಕಂಪನಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಈ ಬಗ್ಗೆ ಚರ್ಚಿಸಲು ಸೋಯಾಬೀಜ ವಿತರಕ ಕಂಪನಿಗಳ ಸಭೆಯನ್ನು ಬೆಂಗಳೂರಿನಲ್ಲಿ ಜೂ. 9 ರಂದು ಕರೆಯಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕಂಪನಿಗಳು ರೈತರೊಂದಿಗೆ 3000 ರೂ. ಹಾನಿ ಪರಿಹಾರ ಕೊಡಲು ಒಪ್ಪಂದ ಮಾಡಿಕೊಂಡಿವೆ ಎಂದು ಸಚಿವರು ತಿಳಿಸಿದರು.
ಶೇಂಗಾ ಸೇರಿದಂತೆ ಇನ್ನಿತರ ಬಿತ್ತನೆಬೀಜಗಳಲ್ಲಿ ಮಣ್ಣು, ಧೂಳು ತ್ಯಾಜ್ಯ ಬರುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಅಂಥ ಬೀಜ ಪೂರೈಸಿದ ಕಂಪನಿಗಳ ವಿರುದ್ಧವೇ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಕಲಿಬೀಜ, ಕಳಪೆಬೀಜ ಮಾರಾಟಕ್ಕೆ ಅಂತ್ಯ ಹಾಡಲು ಕ್ರಮಕೈಗೊಳ್ಳಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಅತಿವೃಷ್ಟಿ ಹಾಗೂ ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಬಿತ್ತನೆ ಕ್ಷೇತ್ರ ಹೆಚ್ಚಾಗಲಿದೆ ಎಂದರು.