ಬಸವನಬಾಗೇವಾಡಿ: ರಾಷ್ಟ್ರೀಯ ಸಂಪತ್ತನ್ನು ಉಳಿಸಬೇಕೆಂಬ ಉದ್ದೇಶದಿಂದ ತಾಲೂಕಿನ ಎಲ್ಲ ಗ್ರಾಮೀಣ ಭಾಗದ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿಕೊಡಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.
ರವಿವಾರ ಜಿಪಂ ಅನುದಾನದಲ್ಲಿ ತಾಲೂಕಿನ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ 61ರಿಂದ ನಂದಿಹಾಳ ಪಿಯು ಗ್ರಾಮದವರೆಗೆ ಕೂಡುವ ರಸ್ತೆ ಸುಧಾರಣೆ ಹಾಗೂ ನಂದಿಹಾಳ ಪಿ.ಯು. ಗ್ರಾಮದಲ್ಲಿ 50 ಲಕ್ಷದಲ್ಲಿ ಸಿಸಿ ರಸ್ತೆ ಹಾಗೂ ಬೊಮ್ಮನಹಳ್ಳಿ ಗ್ರಾಮದಲ್ಲಿ 50 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಡಿಸೇಲ್ ಮತ್ತು ಪೆಟ್ರೋಲ್ ನಮ್ಮ ದೇಶದಲ್ಲಿ ಉತ್ಪತ್ತಿಯಾಗುವುದಿಲ್ಲ. ಬೇರೆ ದೇಶದಿಂದ ಆಮದು ಮಾಡಿಕೊಂಡು ಉಪಯೋಗಿಸಬೇಕಾಗಿದೆ. ಹೀಗಾಗಿ ಈ ರಾಷ್ಟ್ರೀಯ ಸಂಪತ್ತನ್ನು ಉಳಿಸಿ ಬೆಳೆಸಬೇಕಾಗಿದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಸಂಪತ್ತನ್ನು ಉಳಿಸಬೇಕೆಂಬ ಉದ್ದೇಶದಿಂದ ತಾಲೂಕಿನ ಎಲ್ಲ ಹಳ್ಳಿಗಳಿಗೂ ಮತ್ತು ಗ್ರಾಮೀಣ ಭಾಗದಿಂದ ಪಟ್ಟಣ ಪ್ರದೇಶಕ್ಕೆ ಬಂದು ಮತ್ತೆ ಬೇರೆ ಹಳ್ಳಿಗೆ ತೆರಳಿದರೆ ಡಿಸೇಲ್ ಮತ್ತು ಸಮಯ ವ್ಯರ್ಥವಾಗುವ ಉದ್ದೇಶದಿಂದ ಆಯಾ ಗ್ರಾಮದಿಂದ ಒಳ ರಸ್ತೆಗಳನ್ನು ಮಾಡಲಾಗಿದೆ.
ಡೋಣಿ ಭಾಗದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಉಕ್ಕಲಿ ಮತ್ತು ಯಂಭತ್ನಾಳ ಡೋಣಿ ನದಿ ಮಧ್ಯೆ 8 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿರುವುದರಿಂದ ಮಾರಕಪ್ಪನಹಳ್ಳಿ, ಬೊಮ್ಮನಹಳ್ಳಿ, ಮನಗೂಳಿ, ಮಸಿಬಿನಾಳ, ಉಕ್ಕಲಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಈ ಸೇತುವೆಯಿಂದ ಅನೇಕ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.
ಡೋಣಿ ನದಿ ಭಾಗದ ಸುಮಾರು 40 ಹಳ್ಳಿಗಳಿಗೆ 72 ಕೋಟಿ ಹಣದಲ್ಲಿ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು ಬರುವ ತಿಂಗಳಲ್ಲಿ ಎಲ್ಲ ಹಳ್ಳಿಗಳಿಗೆ ಕೃಷ್ಣಾ ನದಿಯ ನೀರು ಪೂರೈಕೆ ಮಾಡಲಾಗುವುದು. ಇದರ ಜೊತೆಯಲ್ಲೇ ಈ ಭಾಗದ ರೈತರಿಗೆ ಮತ್ತು ಸರ್ವಾಜನಿಕರಿಗೆ ನಿರಂತರ ವಿದ್ಯುತ್ ನೀಡುವ ಉದ್ದೇಶದಿಂದ ಉಕ್ಕಲಿ, ರೋಣಿಹಾಳ, ತೆಲಗಿ ಗ್ರಾಮಗಳಲ್ಲಿ 110 ಕೆ.ವಿ. ವಿದ್ಯುತ್ ಸ್ಟೇಷನ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇದೆ ಎಂದು ಹೇಳಿದರು.
ಇಂಗಳೇಶ್ವರದ ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ನಿರ್ದೇಶಕ ವಿಶ್ವನಾಥ ಪಾಟೀಲ, ಎ.ಎಂ. ಪಾಟೀಲ, ಉಕ್ಕಲಿ, ಬಸವರಾಜ ಸೋಮಪುರ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ರಾಜುಗೌಡ ಪಾಟೀಲ, ಶಾಂತಪ್ಪ ಬೈಯಿಚಬಾಳ, ಲಕ್ಕಪ್ಪ ಚಿರಚಲಕಲ್ಲ, ಸುಭಾಷ್ ಕಲ್ಯಾಣಿ, ಬಾಬುಗೌಡ ಪಾಟೀಲ, ಜಗದೀಶ ತಡಗಲ್ಲ, ತಿಮ್ಮರಾಜಪ್ಪ, ಚಂದ್ರಶೇಖರ ಮ್ಯಾಗೇರಿ, ಚಂದ್ರಶೇಖರಗೌಡ ಪಾಟೀಲ, ಮಹೇಶ ಮುಳವಾಡ, ಕಲ್ಲನಗೌಡ ಪಾಟೀಲ, ರಾಮು ಕವಲಗಿ, ಬಿ.ಎಸ್. ಭೋಸ್ಲೆ ಇದ್ದರು. ಅಶೋಕ ಪಾಟೀಲ ಸ್ವಾಗತಿಸಿದರು. ಶರಣಗೌಡ ಭಾವಿಕಟ್ಟಿ ನಿರೂಪಿಸಿದರು. ರವಿ ಭಾವಿಕಟ್ಟಿ ವಂದಿಸಿದರು.