Advertisement

ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸಲಹೆ

02:43 PM Jan 26, 2022 | Shwetha M |

ವಿಜಯಪುರ: ಪ್ರವಾಸೋದ್ಯಮ ಇಲಾಖೆ ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದಲ್ಲಿ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಸೋಮಶೇಖರ ರೋಳಿ ಅಭಿಪ್ರಾಯಪಟ್ಟರು.
ನಗರದ ಸಂಗೀತ ಮಹಲ್‌ ಪ್ರವಾಸಿ ತಾಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ರೋಟರಿ ಕ್ಲಬ್‌ ಆಫ್‌ ವಿಜಯಪುರ-ಮಾನ್ಯುಮೆಂಟಲ್‌ ಹೆರಿಟೇಜ್‌ ಸಿಟಿ, ಆರ್‌ಕೆಎಂ ಆಯುರ್ವೇದ ಮೆಡಿಕಲ್‌ ಕಾಲೇಜ್‌, ಹಾಸ್ಪಿಟಲ್‌ ಮತ್ತು ಪಿಜಿ ರಿಸರ್ಚ್‌ ಸೆಂಟರ್‌ ವಿಜಯಪುರ ಇವರುಗಳ ಸಹಯೋಗದಲ್ಲಿ ಪ್ರವಾಸೋದ್ಯಮ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ವಿಚಾರಗೋಷ್ಠಿ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಥೀಮ್‌ ಅಡಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ರೂಪಿಸುವ ಅನೇಕ ಯೋಜನೆಗಳು ಮುಂಬರುವ ದಿನಗಳಲ್ಲಿ ಯಶಸ್ಸು ಕಾಣುವಂತಾಗಲಿ ಎಂದು ಆಶಿಸಿದರು.

Advertisement

ಪ್ರವಾಸೋದ್ಯಮ ಬಲವರ್ಧನೆಯಲ್ಲಿ ನಾಗರಿಕರೂ ಸಹಕರಿಸುವ ಅಗತ್ಯವಿದೆ. ಮಕ್ಕಳಿಗೆ ಸ್ಮಾರಕಗಳ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದ ಅವಕಾಶಗಳ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.

ಅಝಾದಿ ಕಾ ಅಮೃತ ಮಹೋತ್ಸವ ಥೀಮ್‌ ಅಡಿ ವಿಜಯಪುರ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಈ ವರ್ಷದ ಆಚರಣೆಯ ವಿಷಯವಾಗಿ ಗುರುತಿಸಿ, ರಾಷ್ಟ್ರೀಯ ಪ್ರವಾಸೋದ್ಯಮ ದಿನ ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದ ಡಾ| ರಮೇಶ ಕಾಂಬಳೆ, ನಾವೆಲ್ಲರೂ ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕು. ಅದರಂತೆ ವಿಜಯಪುರ ಜಿಲ್ಲೆಯು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು ಇದರಲ್ಲಿ ನವರಸಪುರಕ್ಕೆ ವಿಶೇಷ ಮಹತ್ವ ಬಂದಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮೀಣ ಮಟ್ಟದಲ್ಲಿ ಸಮುದಾಯಗಳಿಗೆ ಉದ್ಯೋಗಾವಕಾಶ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

Advertisement

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ರಸಪ್ರಶ್ನೆ, ಭಾಷಣ ಸರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಪೀಟರ್‌ ಅಲೆಕ್ಸಾಂಡರ್‌, ಅಡಿವೆಪ್ಪ ಸಾಲಗಲ್‌, ಶಂಭುಲಿಂಗ ಕರ್ಪೂರಮಠ, ಭೀಮರಾಯ ಜಿಗಜಿಣಗಿ, ಮಹೇಶ ಕ್ಯಾತನ್‌, ಅಂಬಾದಾಸ ಜೋಶಿ, ರಾಕೇಶ, ವರದರಾಜನ್‌, ನಂದಕುಮಾರ ರುದ್ರಗೌಡರ, ವಿದ್ಯಾರ್ಥಿನಿ ಅಕ್ಷತಾ ಅಂಬೂರ, ಸೋಮನಗೌಡ ಕಲ್ಲೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next