Advertisement

ಸರ್ಕಾರದ ಯೋಜನೆ ಸದುಪಯೋಗಕ್ಕೆ ಸಲಹೆ

06:05 PM Jul 17, 2022 | Team Udayavani |

ಇಳಕಲ್ಲ: ನಂದವಾಡಗಿಯಿಂದ ಕಂಬಳಿಹಾಳ ಗ್ರಾಮದವರೆಗಿನ ರಸ್ತೆ ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೆ 6.80 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ಕಂಬಳಿಹಾಳ ಗ್ರಾಮದ ಶರಣಮ್ಮ ತಾಯಿಯವರ ಮಠದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಿ ರಸ್ತೆ ಅಭಿವೃದ್ಧಿಯಾಗಲಿದೆ. ಗ್ರಾಮದಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ಗ್ರಾಮದ ಪ್ರತಿಯೊಂದು ಮನೆಗೆ ನಲ್ಲಿ ಮೂಲಕ ನೀರು ನೀಡಲು 14 ಲಕ್ಷ ರೂ. ವೆಚ್ಚದ ನೀರಿನ ಓವರ್‌ ಟ್ಯಾಂಕ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಂಬಳಿಹಾಳಕ್ಕೆ ಆಗಮಿಸಿದ್ದು, ಗ್ರಾಮದ ಸಮಸ್ಯೆ ಆಲಿಸಿ, ಸ್ಥಳದಲ್ಲಿಯೇ ಪರಿಹರಿಸುವ ಕಾರ್ಯ ಮಾಡಲಿದ್ದಾರೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಸರಕಾರ ಕಂದಾಯ ದಾಖಲೆಗಳನ್ನು ಮನೆ ಮನೆಗೆ ಉಚಿತವಾಗಿ ತಲುಪಿ ಸುವ ಯೋಜನೆ, ಮಹಿಳೆಯರಿಗಾಗಿ ಉಜ್ವಲ ಯೋಜನೆ, ಪಿ.ಎಂ ಸಮ್ಮಾನ್‌ ಸೇರಿದಂತೆ ಹತ್ತು ಹಲ ವಾರು ಯೋಜನೆ ಜಾರಿಗೆ ತಂದು ರೈತರಿಗೆ, ಮಹಿಳೆ ಯರಿಗೆ ನೆರವಾಗುವ ಕೆಲಸ ಮಾಡುತ್ತಿದೆ ಎಂದರು.

ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿ ಕಂಬಳಿಹಾಳ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ಗ್ರಾಮಸ್ಥರ ಸಮಸ್ಯೆ ಆಲಿಸುವುದರ ಜತೆಗೆ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದರು. ಗ್ರಾಮಸ್ಥರಿಂದ ಶಾಲೆಗಳಲ್ಲಿ ಶೌಚಾಲಯ, ಶಾಲಾ ಕಟ್ಟಡ ದುರಸ್ತಿ, ಪಹಣಿ ತಿದ್ದುಪಡಿ, ಅತಿವೃಷ್ಟಿಯಿಂದ ಹಾಳಾದ ಮನೆಗಳಿಗೆ ಪರಿಹಾರಧನ, ವಿಧವಾ ವೇತನ, ವಿಶೇಷ ಕೋವಿಡ್‌ ಪ್ಯಾಕೇಜ್‌ ಅಡಿ ಶಿಕ್ಷಕರಿಗೆ 5 ಸಾವಿರ ಸಹಾಯಧನ, ನಿವೇಶನ ರಹಿತ ಕುಟುಂಬಗಳಿಗೆ ಜಾಗ, ಜಮೀನುಗಳಿಗೆ ರಸ್ತೆ ಸೇರಿದಂತೆ ಒಟ್ಟು 27ಕ್ಕೂ ಹೆಚ್ಚು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು.

Advertisement

ಗ್ರಾಮದಲ್ಲಿ ಸಿಸಿ ರಸ್ತೆಯಾಗಿಲ್ಲ. ಕಂಬಳಿಹಾಳದಿಂದ ಕರಡಿ, ಬೊಮ್ಮನಹಳ್ಳಿ, ಚಿಕ್ಕ ಆದಾಪೂರಕ್ಕೆ ಹೋಗುವ ರಸ್ತೆ ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ರಸ್ತೆ ಮಧ್ಯೆ ಇರುವ ವಿದ್ಯುತ್‌ ಕಂಬ ತೆರವುಗೊಳಿಸಲು ಸ್ಥಳದಲ್ಲಿದ್ದ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅಂಬೇಡ್ಕರ ಭವನ ದುರಸ್ತಿ, ಕೆರೆ ತುಂಬಿಸುವ ಯೋಜನೆ, ನಂದವಾಡಗಿಯಲ್ಲಿರುವ ಪಶು ಆಸ್ಪತ್ರೆ ಕಟ್ಟಡ ದುರಸ್ತಿ, ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆಗೆ ಗ್ರಾಮಸ್ಥರು ಬೇಡಿಕೆಯನ್ನಿಟ್ಟಾಗ ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗ್ರಾಮ ಸಂಚರಿಸಿ ಖುದ್ದು ವೀಕ್ಷಿಸಿ ಕ್ರಮಕ್ಕೆ ಸೂಚನೆ: ಗ್ರಾಮಸ್ಥರ ಅಹವಾಲು ಹಾಗೂ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಣೆಗೆ ಗ್ರಾಮ ಸಂಚಾರ ಮಾಡಿದರು. ಅಂಗನವಾಡಿ ಕೇಂದ್ರಕ್ಕೆ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆಟ, ಪಾಠ ಹಾಗೂ ಅವರಿಗೆ ವಿತರಿಸುತ್ತಿರುವ ಪೌಷ್ಟಿಕ ಆಹಾರದ ಬಗ್ಗೆ ಪರಿಶೀಲನೆ ನಡೆಸಿದರು. ಮಾತೋಶ್ರೀ ಶರಣಮ್ಮ ತಾಯಿಯ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಪರೀಕ್ಷಿಸಿದರು. ಪಠ್ಯ ವಿಷಯದ ಬಗ್ಗೆ ಕೆಲವೊಂದು ಪ್ರಶ್ನೆ ಕೇಳಿ ಉತ್ತಮ ವಿದ್ಯೆಯನ್ನು ಕಲಿತು ನಮ್ಮಂತೆ ಉನ್ನತ ಹುದ್ದೆ ಪಡೆಯುವಂತೆ ಸಲಹೆ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡು ದುರಸ್ತಿಗೆ ತುರ್ತು ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಇಳಕಲ್ಲ ತಹಶೀಲ್ದಾರ್‌ ಬಸವರಾಜ ಮೆಳವಂಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಜಯಶ್ರೀ ಎಮ್ಮಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಉಪನರ್ದೇಶಕಿ ನಂದ ಹನಮರಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಶಿಧರ ನಾಡಗೌಡರ, ಜಿಲ್ಲಾ ಹಿಂದುಳಿದ ಅಧಿಕಾರಿ ರಮೇಶ ಚವ್ಹಾಣ, ನಂದವಾಡಗಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶರಣಮ್ಮ ನಿಡಸೋಸಿ, ಸದಸ್ಯರಾದ ಮುದಕಪ್ಪ ಕುರಿ, ರಾಜಶೇಖರ ವಸ್ತ್ರದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next