ನರೇಗಲ್ಲ: ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ರೋಣ ತಾಲೂಕು ಎಂಆರ್‌ಡಬ್ಲೂ ಕಾರ್ಯಕರ್ತ ಬಸವರಾಜ ಓಲಿ ಹೇಳಿದರು.
ಪಟ್ಟಣದ ಗಾಂಧಿ ಭವನದಲ್ಲಿ ಮಂಗಳವಾರ ಜಿ.ಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ವಿಕಲಚೇತನರ ಅನುಕೂಲಕ್ಕಾಗಿ ಶೇ. 5ರಷ್ಟು ಅನುದಾನ ಒದಗಿಸಿದ್ದು, ಈ ಅನುದಾನದಡಿ ಪ್ರತಿ ಇಲಾಖೆ ವಿಕಲಚೇತನರಿಗೆ ವಿವಿಧ ಸೌಲಭ್ಯಗಳನ್ನು ಆದ್ಯತೆ ಮೇಲೆ ಒದಗಿಸಲಾಗುತ್ತಿದೆ. ವಿಶೇಷವಾಗಿ ಶೈಕ್ಷಣಿಕ ಸೌಲಭ್ಯಗಳು, ಉದ್ಯೋಗವಕಾಶ, ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ರೋಣ ತಾಲೂಕು ವಿಕಲಚೇತನರ ಸಂಘದ ಮಾಜಿ ಅಧ್ಯಕ್ಷ ಚಂದ್ರಾಮ ಗ್ರಾಮಪುರೋಹಿತ ಮಾತನಾಡಿ, ಸರ್ಕಾರ ವಿಕಲಚೇತನರಿಗಾಗಿ ಅನೇಕ ಸೌಲತ್ತು ನೀಡುತ್ತಿದೆ. ಆದರೆ, ಅವುಗಳು ಅರ್ಹರಿಗೆ ಲಭಿಸುತ್ತಿಲ್ಲ. ಈ ಬಗ್ಗೆ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ವಿಕಲಚೇತನರಿಗೆ ಲಭಿಸುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪ.ಪಂ ಸಿಬ್ಬಂದಿ ಎಸ್.ಎ. ಜಕ್ಕಲಿ, ಗವಿಸಿದ್ಧಪ್ಪ ಗೋಡಚಪ್ಪನವರ, ವೀರಯ್ಯ ಹಿರೇಮಠ, ವೀರಯ್ಯ ಸಂಶಿಮಠ ಸೇರಿದಂತೆ 100ಕ್ಕೂ ಅಧಿಕ ವಿಕಲಚೇತನರು ಇದ್ದರು.