ಸಿಂದಗಿ: ಪಠ್ಯ ಬೋಧನೆ ಮಾಡಿ ಪದವಿ ನೀಡಿದರೆ ಸಾಲದು, ಅವರಲ್ಲಿ ಮಾನವೀಯ ಮೌಲ್ಯ, ದೇಶ ಪ್ರೇಮ ಬೆಳೆಸುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಪದ್ಮರಾಜ ಮಹಿಳಾ ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಹಯ್ನಾಳಕರ ಹೇಳಿದರು.
ಸೋಮವಾರ ಪಟ್ಟಣದ ಅಂಜುಮನ್-ಎ-ಇಸ್ಲಾಂ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾದ ನೂತನ ಅಂಜುಮನ್ ಪದವಿ ಕಾಲೇಜ್ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಕಾಲೇಜುಗಳು ಕೇವಲ ಪದವಿ ಸರ್ಟಿಫಿಕೇಟ್ ನೀಡುವ ಕಾರ್ಖಾನೆಗಳಾಗಬಾರದು. ಶಿಕ್ಷಣ ನೀಡುವ ಜೊತೆಗೆ ದೇಶಕ್ಕೆ ಉತ್ತಮ ನಾಗರಿಕನನ್ನು ಕೊಡುಗೆಯಾಗಿ ನೀಡಬೇಕು. ಸ್ಥಳೀಯ ಅಂಜುಮನ್ ಸಂಸ್ಥೆ ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯುತ್ತಿದೆ.
ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣ ನೀಡುವ ಜೊತೆಗೆ ಐಟಿಐ ತರಬೇತಿ ನೀಡುವ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆಯುತ್ತಿದೆ. ಒಂದು ಸಂಸ್ಥೆ ಬೆಳೆಯಬೇಕಾದರೆ ನಾಗರಿಕರ ಮತ್ತು ಆಡಳಿತ ಮಂಡಳಿ ಸಹಕಾರ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಕಾಣಲು ಸಾಧ್ಯ. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. 1970ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಹಂತ-ಹಂತವಾಗಿ ಬೆಳೆಯುತ್ತ ಬಂದಿದೆ.
ಅಂಜುಮನ್ ಸಂಸ್ಥೆ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕೇಂದ್ರವಾಗಿದೆ. ಈ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಬಡ ವಿದ್ಯಾರ್ಥಿಗಳು. ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮಯಕ್ಕೆ ತಕ್ಕ ಹಾಗೆ ಶಿಕ್ಷಣ ಸಂಸ್ಥೆ ಬೆಳೆಸುತ್ತ ಇಂದು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿ ಪದವಿ ಶಿಕ್ಷಣ ಪಡೆಯುವವರೆಗೆ ಮತ್ತು ಐಟಿಐ ಕಲಿಯಲಿಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.ಪ್ರಾಚಾರ್ಯ ಎಂ.ಡಿ. ಬಳಗಾನೂರ, ಡಾ| ಎಂ.ಬಿ. ವಡಗೇರಿ ಮಾತನಾಡಿದರು. ಸಂಸ್ಥೆ ಚೇರಮನ್ ಎ.ಎ.ದುದನಿ, ನಿರ್ದೇಶಕರಾದ ಮಹೆಬೂಬ ಹಸರಗೂಂಡಗಿ, ಗಫೂರ ಮಸಳಿ, ಪ್ರಾಚಾರ್ಯ ಜಾಕೀರ್ ಅಂಗಡಿ, ಆಫೀಜ್ ಗಿರಿಗಾಂವ, ಉಪಪ್ರಾಚಾರೆ ಎಸ್.ಎ. ದೊಡಮನಿ, ಅರಣ್ಯಾಧಿಕಾರಿ ಐ.ಬಿ. ನೇವಾರ ವೇದಿಕೆಯಲ್ಲಿದ್ದರು.
ಆರ್.ಎ. ಹೊಸಗೌಡರ, ಮಕ್ಕಳ ಸಾಹಿತಿ ರಾ.ಸಿ. ವಾಡೇದ, ಪ್ರಾಚಾರ್ಯ ಐ.ಸಿ. ಬಳೂಂಡಗಿ ಇದ್ದರು. ಆಯಿಶಾ ನಾಗಠಾಣ ಪ್ರಾರ್ಥಿಸಿದರು. ಪ್ರಾಚಾರ್ಯ ಎಂ.ಎಂ. ಮುಲ್ಲಾ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಪ್ರಭುಲಿಂಗ ಲೋಣಿ ನಿರೂಪಿಸಿದರು. ಬಿ.ಎ.ಬುದೂರ ವಂದಿಸಿದರು.