ಹುಬ್ಬಳ್ಳಿ: ಮಕ್ಕಳಿಗಾಗಿ ಕೋಟ್ಯಂತರ ರೂ. ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ದೊಡ್ಡ ಆಸ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪಾಲಕರು ಚಿಂತಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಘಂಟೀಕೇರಿಯ ಶಾಂತಿನಾಥ ಪ್ರೌಢಶಾಲೆಯಲ್ಲಿ ಶಹರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 2018-19ನೇ ಸಾಲಿನ ವಿವಿಧ ವಿಷಯ ಪರಿವಾರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸತತ ಪ್ರಯತ್ನ, ಕಠಿಣ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಶ್ಲಾಘನೀಯ ಎಂದರು.
ಸರಕಾರಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಹಾಗೂ ಕೆಲ ಸರಕಾರಿ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣದಲ್ಲೂ ಇದೇ ರೀತಿ ಸಾಧನೆ ಮಾಡಬೇಕು. ಇವರ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೈಷ್ಣವಿ ಗುಂಡಿಕೇರಿ, ನಜ್ಮಾ ಕಮ್ಮಾರ, ಅರ್ಚನಾ ಕೋಟಗಿ, ಗಾಯತ್ರಿ ಅರ್ಕಸಾಲಿ, ಸಂಸ್ಕೃತಿ ಬಿಳಗಿ, ಸ್ವಾತಿ ಬೆಳವಡಿಮಠ, ನಿಸರ್ಗ ಯಲಬುರ್ಗಿ, ರುಕ್ಸಾರ್ ಬಂಕಾಪುರ, ಉಮೆಹಮಿ ಅಜಮಿ, ನವೀನ ಬಳ್ಳಾರಿ, ಸಿಮ್ರಾನ್ ಸೈಯದ್, ಐಶ್ವರ್ಯಾ ಬೆಳಂಕರ ಅವರನ್ನು ಪುರಸ್ಕರಿಸಲಾಯಿತು.
ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯಾಧ್ಯಾಪಕರನ್ನು ಸನ್ಮಾನಿಸಲಾಯಿತು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಂಬಾರ, ಶಾಂತಿ ನಿಕೇತನ ಶಿಕ್ಷಣ ಟ್ರಸ್ಟ್‌ನ ಸಿ. ಬೋರಣ್ಣ, ಭರತ ಬಂಡಾರಿ, ಪ್ರಾಚಾರ್ಯ ಕ್ಯಾಥರೀನ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಪ್ರೌಢಶಾಲೆ ಮುಖ್ಯಾಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.