ಸಿಂದಗಿ: ಆರೋಗ್ಯವೇ ಭಾಗ್ಯ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ನಾವು ಮಾಡುವ ಪ್ರಯತ್ನಗಳೆಷ್ಟು? ಬೆಳಗ್ಗೆ ವಾಕಿಂಗ್, ಜಾಗಿಂಗ್, ಜಿಮ್ಮಿಂಗ್, ಸ್ವಿಮ್ಮಿಂಗ್ ಎಲ್ಲಾ ಮಾಡುತ್ತೇವೆ ಆದರೆ ಊಟದ ವಿಷಯ ಬಂದಾಗ ಅದನ್ನು ಕಡೆಗಾಣಿಸುತ್ತೇವೆ. ಆಹಾರ ಸೇವನೆ ವಿಚಾರದಲ್ಲಿ ಯಾವ ನಿಯಂತ್ರಣವನ್ನೂ ಹಾಕಿಕೊಳ್ಳುವುದಿಲ್ಲ. ದೈಹಿಕ ಶ್ರಮದ ಜೊತೆಗೆ ಸರಿಯಾದ ಆಹಾರ ಸೇವನೆ ಮಾಡಿದರೆ ಮಾತ್ರ ನಾವು ಅರೋಗ್ಯವಂತರಾಗಿರುತ್ತೇವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಆರೋಗ್ಯ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಪ್ರತಿನಿತ್ಯ ತಿನ್ನುವ ಕೆಲವು ಆಹಾರಗಳು ನಮಗೆ ಒಳ್ಳೆಯ ಆರೋಗ್ಯ ನೀಡುವುದಲ್ಲದೇ ನಮ್ಮ ದೈಹಿಕ ಶಕ್ತಿ ಹೆಚ್ಚಿಸುವ ಮತ್ತು ರೋಗಗಳನ್ನು ತಡೆಗಟ್ಟು ಗುಣ ಕೂಡ ಹೊಂದಿರುತ್ತದೆ. ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವುದೇ ಸುಲಭ ಮಾರ್ಗ ಎಂದು ಹೇಳಿದರು.
ಆರೋಗ್ಯವಂತರಾಗಿರಲು ಎಲ್ಲಾ ರೀತಿಯ ಮೊಳಕೆ ಕಾಳು, ಸೊಪ್ಪು, ದ್ವಿದಳ ಧಾನ್ಯದಿಂದ ತಯಾರಿಸಿದ ಆಹಾರ, ಹಣ್ಣು, ಮೊಟ್ಟೆ, ಹಾಲು ಸೇವಿಸಬೇಕು. ಕೆಲವರು ನಿತ್ಯ ಒಂದೇ ರೀತಿಯ ಆಹಾರ ಸೇವಿಸುವುದರಿಂದ ರಕ್ತಹೀನತೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಧೂಮಪಾನ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಕಾಯಿಲೆ ಬರಲಿದೆ. ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ಶ್ರಮ ನೀಡುವ ಕೆಲಸ ಮಾಡದಿರುವುದರಿಂದ ಹಾಗೂ ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಸಮಗ್ರ ಪೋಷಕಾಂಶ ಸಿಗುತ್ತಿಲ್ಲ. ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಲಿದೆ. ಅನೇಕ ಕಾಯಿಲೆಯಿಂದ ಬಳಲಬೇಕಾಗಬಹುದೆಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಅನುಕರಣಾಶೀಲರಾಗಿದ್ದರಿಂದ ಮೊದಲು ಶಿಕ್ಷಕರು ಆದರ್ಶ ಜೀವನ ನಡೆಸಬೇಕು. ಸಮತೋಲನ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳ ಬೇಕು. ಯಾವುದೇ ವ್ಯಸನಕ್ಕೆ ಬಲಿಯಾಗಬಾರದು. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಆರೋಗ್ಯದ ಅರಿವು ಮುಡಿಸಬೇಕು ಎಂದು ಸಲಹೆ ನಿಡಿದರು.
ತಾಲ್ಲೂಕಿನ ಆರೋಗ್ಯ ಶಿಕ್ಷಣಾಕಾರಿ ಎಸ್.ಡಿ. ಕುಲಕರ್ಣಿ, ನೀರಿಕ್ಷಣಾಕಾರಿ ವಿ.ವೈ. ಚೌಡಕಿ, ಡಾ. ಪ್ರಿಯಾಂಕ ಆರೋಗ್ಯ, ಡಾ.ಮಹಾಂತೇಶ ಹಿರೇಮಠ ಮಾತನಾಡಿ, ಸಮತೋಲನ ಆಹಾರ ಸೇವನೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳ ಬೇಕು. ಎಲ್ಲಾ ರೀತಿಯ ಮೊಳಕೆ ಕಾಳುಗಳು, ವಿವಿಧ ಹಣ್ಣುಗಳು, ಪಲ್ಯಗಳು ಸೇರಿದಂತೆ ಮೊಟ್ಟೆ, ಹಾಲು ವಿವಿಧ ಸಮತೋಲನ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು. ಭಾರತಿಯ ಸ್ಕೌಟ್ಸ್ ಗೆ„ಡ್ಸ್ ಸೋಮಪೂರ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.