ಕಾರಟಗಿ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು
ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಅರಳಿ ಹೇಳಿದರು. ಪಟ್ಟಣದ ನವಲಿ ರಸ್ತೆಯ ಶ್ರೀ ರಾಘವೇಂದ್ರ ಪಾಲಿ ಕ್ಲಿನಿಕ್ ವತಿಯಿಂದ ಮಂಗಳವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಶಿಬಿರದ ನೇತೃತ್ವವನ್ನು ರಾಜೀವ್ ಗಾಂಧಿ ಗೋಲ್ಡ್ ಮೆಡಲ್ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರೂ ಆದ ಡಾ| ಜಿ. ನಾರಾಯಣ ಅವರು ವಹಿಸಿಕೊಂಡಿರುವುದು ಸಂತಸದ ವಿಷಯ. ಉದ್ಯಮಿ ಪ್ರಹ್ಲಾದ ಶ್ರೇಷ್ಠಿಯವರುಅವರಿಗೆ ಬೆಂಬಲವಾಗಿ ನಿಂತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ನಂತರ ತಜ್ಞ ವೈದ್ಯ ಡಾ| ಜಿ. ನಾರಾಯಣ ಮಾತನಾಡಿ, ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದದೇನೆ ಎಂದರು.
ಇದನ್ನೂ ಓದಿ:ವಿವಿಧೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ
ನ್ಯಾಯವಾದಿ ಶಿವರೆಡ್ಡಿ ನಾಯಕ್, ಫ್ಯಾಮಿಲಿ ಫಿಜಿಶಿಯನ್ ಮತ್ತು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ| ಜಿ.ವೈ. ಸಂಧ್ಯಾ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಗೋವಿಂದರಾಜ್‌ಶ್ರೇಷ್ಠಿ , ಜಿ. ನಾಗರೆಡ್ಡೆಪ್ಪ , ಪ್ರಹ್ಲಾದ್ ಶ್ರೇಷ್ಠಿ , ಗೋಪಾಲ ಶ್ರೇಷ್ಠಿ , ನರಸಯ್ಯ ಶ್ರೇಷ್ಠಿ ಇನ್ನಿತರರ ಇದ್ದರು.