ಹುಬ್ಬಳ್ಳಿ: ಗ್ರಾಪಂ ಸದಸ್ಯರು ತಮ್ಮ ಗ್ರಾಮಗಳಲ್ಲಿ ನರೇಗಾ ಅಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಜನರ ವಿಶ್ವಾಸ ಗಳಿಸಬೇಕು. ಸಾಮೂಹಿಕ ಕಾರ್ಯಕ್ರಮ ಜೊತೆಗೆ ವೈಯಕ್ತಿಕವಾಗಿ ಪ್ರತಿಯೊಬ್ಬ ಮತದಾರರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರು ರವಿವಾರ ಹಮ್ಮಿಕೊಂಡಿದ್ದ ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗ್ರಾಪಂಗಳಿಗೆ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಪಕ್ಷ ಗ್ರಾಪಂಗಳಿಗೆ ಅತಿ ಹೆಚ್ಚು ಅನುದಾನ ನೀಡಿದೆ. ಅದರ ಫಲವಾಗಿ ಕನಕಪುರ ಕ್ಷೇತ್ರದಲ್ಲಿ ನರೇಗಾ ಅಡಿ ಒಂದೊಂದು ಗ್ರಾಪಂಗೆ 2-3ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಕನಕಪುರ ತಾಲೂಕಿನಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತಹ ಮಾದರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಕೇಂದ್ರ ಸರಕಾರವು ದೇಶದಲ್ಲೇ ನಂಬರ್ ಒನ್ ತಾಲೂಕು ಎಂದು ಪ್ರಶಸ್ತಿ ನೀಡಿದೆ. ಗ್ರಾಪಂ ಸದಸ್ಯರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸ್ವತಃ ಯೋಜನೆ ರೂಪಿಸಿ, ಅಂದಾಜು ವೆಚ್ಚ ತಯಾರಿಸಿ ಪ್ರತಿ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಬೇಕು ಎಂದರು.
ಅವಿಭಜಿತ ಧಾರವಾಡ ಕ್ಷೇತ್ರದ ಸ್ಥಳೀಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತ ಸಲೀಂ ಅಹ್ಮದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಟ್ಟು ಗೆಲ್ಲಿಸುವ ಮೂಲಕ ಶಕ್ತಿ ತುಂಬಿ ನಿಮ್ಮ ಧ್ವನಿಯಾಗಿ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನೀವೇ ಸ್ಪರ್ಧಿಸಿದ್ದೀರಿ ಎಂದು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ ಮಾತನಾಡಿ, ವಿಧಾನ ಪರಿಷತ್‌ನಲ್ಲಿ ಕೆಲಸ ಮಾಡಿದ, ಸರಕಾರದ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ನಿಮ್ಮ ಧ್ವನಿಯಾಗಲು ಬಹುಮತಗಳಿಂದ ಆರಿಸಿ ತರುವ ಮೂಲಕ ಆಶೀರ್ವಾದ ಮಾಡಿ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುವೆ ಎಂದರು.
ನಾಗರಾಜ ಛಬ್ಬಿ ಮಾತನಾಡಿ, ಸಲೀಂ ಅಹ್ಮದ ಅವರ ಗೆಲುವು ಸೂರ್ಯ-ಚಂದ್ರನಷ್ಟೇ ಸತ್ಯ. ಅವರನ್ನು ಬಿಜೆಪಿ ಅಭ್ಯರ್ಥಿಗಿಂತ ಅಧಿಕ ಮತಗಳಿಂದ ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು. ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ಕೆ.ಎನ್. ಗಡ್ಡಿ, ಅಲ್ಕೋಡ ಹನುಮಂತಪ್ಪ, ಮುಖಂಡ ಷಣ್ಮುಖ ಶಿವಳ್ಳಿ, ಅಲ್ತಾಫ ಹಳ್ಳೂರ ಮೊದಲಾದವರಿದ್ದರು.