ಕೆಂಗೇರಿ: “ಪರಿಸರವನ್ನು ನಿರ್ಲಕ್ಷಿಸಿದ ಪರಿಣಾಮದಿಂದಾಗಿ ಇಂದು ನಾವು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದರ ನಿವಾರಣೆಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪರಿಸರ ಪ್ರಜ್ಞೆ ಕಾಪಾಡಿಕೊಳ್ಳುವ ಅಗತ್ಯವಿದೆ,’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಮಿಕ ವಿಭಾಗದ ವತಿಯಿಂದ ಕೆಂಗೇರಿ ಉಪನಗರದ ಉದ್ಯಾನವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಹಾಗೂ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಒತ್ತಡದ ಜೀವನ ಶೈಲಿಯ ಪರಿಣಾಮದಿಂದ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾಗರಿಕರು ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿರಿಯ ನಾಗರಿಕರು ಮಹಿಳೆಯರು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಬೇಕು,’ ಎಂದು ಸಲಹೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ಕಾರ್ಮಿಕ ವಿಭಾಗದ ಅಧ್ಯಕ್ಷ ಮಹೇಂದ್ರ ಎನ್.ಎಸ್ ಮಾತನಾಡಿ “ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಬಗ್ಗೆ ಆಲೋಚನೆ ಮಾಡಬೇಕು,’ ಎಂದರು. ಶಿಬಿರದಲ್ಲಿ ಪರೀಕ್ಷೆಗೆ ಒಳಪಟ್ಟ ಮುನ್ನೂರಕ್ಕು ಹೆಚ್ಚು ನಾಗರಿಕರಿಗೆ ಉಚಿತವಾಗಿ ಔಷಧ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತೋಷ ಕ್ಲಿನಿಕ್‌ನ ಡಾ.ವಿಷ್ಣು ಸಭಾಹಿತ್, ಆದರ್ಶ ಆಸ್ಪತ್ರೆಯ ಡಾ.ಮಂಜುನಾಥ್, ಸಪ್ತಗಿರಿ ಸ್ಕಿನ್ ಕೇರ್ ಸೆಂಟರ್‌ನ ಡಾ.ಲೋಕನಾಥ್ .ಕೆ, ಡಾ.ಎಸ್.ಸಿ.ಶಂಕರಲಿಂಗಯ್ಯ, ಕೆಂಗೇರಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಟಿ.ಪ್ರಭಾಕರ್, ಕೆ.ಸಿ.ಸತೀಶ್ ಮತ್ತಿತರರು ಇದ್ದರು.