Advertisement

ರಾಷ್ಟ್ರಧ್ವಜ-ರಾಷ್ಟ್ರಗೀತೆ ನಿಯಮ ಕಡ್ಡಾಯವಾಗಿ ಪಾಲಿಸಲು ಸಲಹೆ

05:48 PM Jan 25, 2021 | Nagendra Trasi |

ಮುದ್ದೇಬಿಹಾಳ: ಭಾರತ ದೇಶದ ಪಂಚ ಕಳಸ ಎನ್ನಿಸಿಕೊಂಡಿರುವ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಭಾಷೆ ಮತ್ತು ಸಂವಿಧಾನವನ್ನು
ಎಲ್ಲ ಭಾರತೀಯರು ಗೌರವಿಸಬೇಕು. ಇವು ದೇಶಪ್ರೇಮ, ದೇಶಭಕ್ತಿಯ ಸಂಕೇತಗಳಾಗಿವೆ ಎಂದು ಭಾರತ ಸೇವಾ ದಳದ ಬೆಳಗಾವಿ ವಿಭಾಗ ಸಂಚಾಲಕ ನಾಗೇಶ ಡೋಣೂರ ಹೇಳಿದರು. ಪಟ್ಟಣದ ಕೆಬಿಎಂಪಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ,
ದೈಹಿಕ ಶಿಕ್ಷಕರ ಸಂಘ ಹಾಗೂ ಸೇವಾ ದಳ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ದೈಹಿಕ ಶಿಕ್ಷಕರಿಗೆ ಏರ್ಪಡಿಸಿದ್ದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Advertisement

ರಾಷ್ಟ್ರೀಯ ಹಬ್ಬ ಸೇರಿ ಹಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಧ್ವಜಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು. ರಾಷ್ಟ್ರಗೀತೆ ಹಾಡುವಾಗಲೂ ಸಮಯ ಪಾಲನೆಗೆ ಮಹತ್ವ ಕೊಡಬೇಕು. ರಾಷ್ಟ್ರಧ್ವಜಕ್ಕೆ ವಿಶೇಷ ಗೌರವ ಇದ್ದು ಬೇಕಾಬಿಟ್ಟಿ ಹಾರಿಸುವಂತಿಲ್ಲ. ಇದಕ್ಕೆ ಸೂಕ್ತ ತರಬೇತಿ ಹೊಂದಿದವರನ್ನೇ ಬಳಸಬೇಕು ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಎಸ್‌. ಕವಡಿಮಟ್ಟಿ, ಕೋವಿಡ್‌-19ನಂತರ ಕಠಿಣ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡಿದ್ದು ಶ್ಲಾಘನೀಯ. ನಮ್ಮ ತಾಲೂಕಿನ ಮಕ್ಕಳು ಕ್ರೀಡೆ, ದೇಶಭಕ್ತಿ ಅನಾವರಣಗೊಳಿಸುವಂಥ ಕಾರ್ಯಕ್ರಮಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಸಾಧನೆ ಮಾಡುವ ರೀತಿಯಲ್ಲಿ ತರಬೇತಿ ಕೊಡಬೇಕು. ದೈಹಿಕ ಶಿಕ್ಷಕರು ಶಾಲೆಯ ಪಠ್ಯೇತರ ಚಟುವಟಿಕೆಯ ಬೆನ್ನೆಲುಬು ಇದ್ದ ಹಾಗೆ. ಅವರು ಸದಾ ಲವಲವಿಕೆಯಿಂದ ಇರಬೇಕು. ಇದು ಮಕ್ಕಳಿಗೆ ಪ್ರೇರಣೆ, ಉತ್ಸಾಹ ತಂದುಕೊಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ದೈಹಿಕ ಶಿಕ್ಷಣಾ ಧಿಕಾರಿ ಎಚ್‌.ಎಲ್‌. ಕರಡ್ಡಿ, ರಾಷ್ಟ್ರಧ್ವಜ ಆರೋಹಣ, ಅವರೋಹಣದ ಪದ್ಧತಿ, ನಿಯಮಗಳನ್ನು ಪ್ರತಿಯೊಬ್ಬ ದೈಹಿಕ ಶಿಕ್ಷಕ ಅರಿತಿರಬೇಕು. ಮಕ್ಕಳಿಗೂ ಇದರ ಬಗ್ಗೆ ತರಬೇತಿ ಕೊಡಬೇಕು. ತಾವು ಸೇವೆ ಸಲ್ಲಿಸುವ ಶಾಲೆಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದ ಮುಖ್ಯಾಧ್ಯಾಪಕಿ ಎನ್‌.ಬಿ. ತೆಗ್ಗಿನಮಠ, ಕೆಬಿಎಂಪಿಎಸ್‌ ಮುಖ್ಯಾಧ್ಯಾಪಕ ಟಿ.ಎನ್‌. ರೂಢಗಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌. ಆರ್‌. ಸುಲ್ಪಿ, ಜಂಗಮುರಾಳ ವಿಬಿಸಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್‌.ಆರ್‌. ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್‌.ಎಸ್‌. ಬಾಣಿ ವೇದಿಕೆಯಲ್ಲಿದ್ದರು.

Advertisement

ರಾಷ್ಟ್ರಧ್ವಜ ಯಾವ ಸಂಧರ್ಭ ಆರೋಹಣ, ಅವರೋಹಣ ಮಾಡಬೇಕು, ಅರೋಹಣ, ಅವರೋಹಣದ ಕೌಶಲ್ಯಗಳು,  ರಾಷ್ಟ್ರಗೀತೆ ಮತ್ತು ನಾಡಗೀತೆ ನುಡಿಸುವ
ಪದ್ಧತಿ, ಇವುಗಳಿಗೆ ನಿಗದಿಪಡಿಸಲಾದ ಸಮಯ ಮುಂತಾದವುಗಳ ಕುರಿತು ದೈಹಿಕ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಹರಿದುಹೋದ, ಮಾಸಿಹೋದ,
ಕೊಳಕಾದ ಧ್ವಜಗಳನ್ನು ಹಾರಿಸಬಾರದು. ಇಂಥವು ಕಂಡು ಬಂದಲ್ಲಿ ತಹಶೀಲ್ದಾರ್‌ಗೆ ಲಿಖೀತ ಮಾಹಿತಿ ಸಲ್ಲಿಸಿ ಐಎಸ್‌ಐ ಮಾರ್ಕ್‌ ಹೊಂದಿರುವ ಧ್ವಜವನ್ನು ಮಾತ್ರ ಖರೀದಿಸಬೇಕು. ಧ್ವಜವು ಕಂಬದಲ್ಲಿ ಸ್ವತ್ಛಂದವಾಗಿ ಹಾರಾಡುವ ರೀತಿಯಲ್ಲಿ ಇರಬೇಕು. ಧ್ವಜಕಂಬಕ್ಕೆ ದಾರ, ಪರಪರಿ ಮುಂತಾದವುಗಳನ್ನು  ಕಟ್ಟಬಾರದು. ಧ್ವಜಕಂಬದ ಕೆಳಗೆ ಯಾವುದೇ ನಾಯಕರ ಫೋಟೋ ಇಡಬಾರದು ಎಂದು ತಿಳಿಸಲಾಯಿತು.

ವಿಜಯಪುರ ಜಿಲ್ಲೆಯಿಂದ ಬೆಳಗಾವಿ ವಿಭಾಗಕ್ಕೆ ಪದೋನ್ನತಿ ಹೊಂದಿರುವ ನಾಗೇಶ ಡೋಣೂರ, ಕೋವಿಡ್‌-19 ಸಂದರ್ಭ ಅತ್ಯುತ್ತಮ ಸೇವೆ ಸಲ್ಲಿಸಿದ ಮುದ್ದೇಬಿಹಾಳ ತಾಲೂಕು ಭಾರತ ಸೇವಾ ದಳದ ಸಂಚಾಲಕ ಎಂ.ವಿ. ಕೋರವಾರ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಸ್‌. ತೆಗ್ಗಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಎ.ಸಿ. ಕೆರೂರ ನಿರೂಪಿಸಿದರು. ನಾಲತವಾಡದ ಸರ್ಕಾರಿ ಉರ್ದು ಪ್ರೌಢಶಾಲೆ ದೈಹಿಕ ಶಿಕ್ಷಕ ಬಿ.ಬಿ. ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next