ಮಲ್ಪೆ: ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹಾಗೂ ಹೇರಳವಾಗಿ ದೊರೆಯುತ್ತಿದ್ದ ಬೂತಾಯಿಮೀನಿನ ಪ್ರಮಾಣ ಕಳೆದ ಕೆಲವು ವರ್ಷಗಳಿಂದ ತೀರಾ ಕಡಿಮೆಯಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಬೂತಾಯಿ ಮೀನಿನ ಒಟ್ಟು ದಾಸ್ತಾನಿನ ಪ್ರಮಾಣಕ್ಕೆ ಹೋಲಿಸಿದಾಗ ಮೊಟ್ಟೆ ಇಡುವ ಮೀನಿನ ಶೇಕಡಾವಾರು ಪ್ರಮಾಣ ಅತಿ ಕಡಿಮೆ ಇರುವುದು ಕಳೆದ ಕೆಲವು ವರ್ಷಗಳ ಅಧ್ಯಯನದಿಂದ ತಿಳಿದು ಬಂದಿದ್ದು ಮೀನುಗಾರರು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಹಿಡಿಯದೆ ಇದ್ದಲ್ಲಿ ಸಂತಾನೋತ್ಪತ್ತಿ ಜಾಸ್ತಿಯಾಗಲು ಸಹಾಯವಾಗುತ್ತದೆ ಎಂದು ಸಿಎಂಎಫ್‌ಆರ್‌ಐನ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಏರಿಳಿತಕ್ಕೆ ಎಲ್ನಿನೊ ಆನಂತರದಲ್ಲಿ ಸಮುದ್ರ ಪರಿಸರದಲ್ಲಾದ ಪ್ರತಿಕೂಲ ಬದಲಾವಣೆಗಳೇ ಪ್ರಮುಖ ಕಾರಣವೆಂದು ಸಿಎಂಎಫ್‌ಆರ್‌ಐ ಸಂಶೋಧನಾ ವರದಿ ಯಿಂದ ತಿಳಿದುಬಂದಿದೆ. 2019ರಲ್ಲಿ ಈ ಮೀನಿನ ಉತ್ಪಾದನೆ 12,396 ಟನ್‌ಗಳಿಗೆ ಇಳಿಕೆಯಾದರೆ, ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯು 77,704 ಟನ್‌ಗಳಾಗಿವೆ. ಕಡಿಮೆ ಸಾಂದ್ರತೆಯುಳ್ಳ ಚದುರಿದ ಬೂತಾಯಿಯ ಗುಂಪುಗಳು 2020ರ ಕೊನೆಯ ಭಾಗದಲ್ಲಿ ಕರ್ನಾಟಕ ಕರಾವಳಿಯ ದಕ್ಷಿಣ, ಮಧ್ಯಭಾಗದ
ಉದ್ದಕ್ಕೂ ಗೋಚರಿಸಿದ್ದು, ಇತ್ತೀಚೆಗೆ ಹಿಡಿಯಲ್ಪಡುತ್ತಿರುವ ಬೂತಾಯಿ ಮೀನುಗಳು, ಸಿಎಂಎಫ್‌ಆರ್‌ಐನ ವಿಜ್ಞಾನಿಗಳು ಶಿಫಾರಸು ಮಾಡಿರುವ ಕನಿಷ್ಠ ಕಾನೂನಾತ್ಮಕ ಗಾತ್ರಕ್ಕಿಂತ ದೊಡ್ಡದಿದ್ದರೂ ಸಹ ಮೀನುಗಳು ಇನ್ನೂ ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿ ಹಂತವನ್ನು ತಲುಪಿರುವುದಿಲ್ಲ ಎಂದು ಮಂಗಳೂರು ಪ್ರಾದೇಶಿಕ ಕೇಂದ್ರದ ಪೆಲಾಜಿಕ್ ಫಿಶರೀಸ್ ವಿಭಾಗದ ವಿಜ್ಞಾನಿಗಳಾದ ಡಾ| ಪ್ರತಿಭಾ ರೋಹಿತ್ ಮತ್ತು ಡಾ| ರಾಜೇಶ್ ಕೆ. ಎಂ. ಅವರು ತಿಳಿಸಿದ್ದಾರೆ.
ಸಿಎಂಎಫ್‌ಆರ್‌ಐ ಸೂಚನೆಯಂತೆ ಮೀನುಗಾರರು ಬೂತಾಯಿ ಮೀನುಗಾರಿಕೆಗೆ ಸ್ವಯಂ ಪ್ರೇರಿತರಾಗಿ ನಿಯಂತ್ರಣ ಹೇರಿಕೊಂಡರೆ ಅದರ ಬದುಕುಳಿಯುವಿಕೆ ಪ್ರಮಾಣ ಹೆಚ್ಚಲು ಸಹಾಯವಾಗುತ್ತದೆ.
–ಡಾ| ಪ್ರತಿಭಾ ರೋಹಿತ್, ಸಿಎಂಎಫ್‌ಆರ್‌ಐ, ಮಂಗಳೂರು