Advertisement

ನೀರಿನ ಸಮಸ್ಯೆ ಪರಿಹಾರಕ್ಕೆ ಸಲಹೆ

10:45 AM Feb 25, 2019 | |

ಶಹಾಪುರ: ಸರ್ಕಾರದ ವಿವಿಧ ಯೋಜನೆಯಲ್ಲಿ ಮಂಜೂರುಗೊಂಡು ಪೂರ್ಣಗೊಳ್ಳದೆ ಅರ್ಧದಲ್ಲಿ ನಿಲ್ಲಿಸಲಾದ ಕಾಮಗಾರಿಗಳು ಪ್ರಸ್ತುತ ಮಾರ್ಚ್‌ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅಧಿಕಾರಿಗಳಿಗೆ ಆದೇಶಿಸಿದರು. ಇಲ್ಲಿನ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ವಿವಿಧ ಯೋಜನೆ ಕಟ್ಟಡಗಳು, ರಸ್ತೆ, ಚರಂಡಿಗಳು ಸೇರಿದಂತೆ ಇತರೆ ಕಾಮಗಾರಿ ಕೆಲಸಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ಬರುವ ಬಜೆಟ್‌ ಅನುದಾನದ ಸದ್ಬಳಿಕೆಗೆ ತಯಾರಿ ನಡೆಸುವ ಹಿನ್ನೆಲೆಯಲ್ಲಿ, ಪ್ರಸ್ತುತ ಉಳಿದಿರುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಯಾವುದೇ ಕಾರಣಕ್ಕೂ ಅಧಿಕಾರಿಗಳು ಹಿಂದೇಟು ಹಾಕಬಾರದು. ಪ್ರಗತಿಯತ್ತ ಗಮನ ಹರಿಸಬೇಕು. ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಡಿಯಲ್ಲಿ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲನೆ ಮಾಡುವುದರ ಮುಖಾಂತರ ಗ್ರಾಮಗಳಲ್ಲಿ
ಕುಡಿಯುವ ನೀರಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕೊಳವೆ ಬಾವಿಗಳ ದುರಸ್ತಿ ಹಾಗೂ ಬಾಕಿ ಇರುವ ಘಟಕಗಳ ನವೀಕರಣ ಕಾಮಾಗಾರಿ ಕೈಗೊಂಡು ಮಾರ್ಚ್‌ ವೇಳೆಗೆ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಳ್ಳುವಂತೆ ನೋಡಿಕೊಳ್ಳಬೇಕು. 

ನಾಗರಿಕರಿಗೆ ಕುಡಿಯುವ ನೀರಿನ ಅಭಾವ, ಕೊರತೆ ಕಾಡದಂತೆ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಅಂತರ್ಜಲ ಕುಸಿತದಿಂದ ನೀರಿನ ಅಭಾವ ಜಾಸ್ತಿಯಾಗಿದೆ. ಕೊಳವೆ ಬಾವಿ ಬತ್ತುತ್ತಿವೆ. ಕೆರೆ, ಬಾವಿಗಳಲ್ಲಿ ನೀರಿಲ್ಲ. ಮಳೆ ಬಾರದ ಕಾರಣ ಬರಗಾಲ ತೀವ್ರವಾಗಿದೆ ಕಾಡಲಿದೆ. ಬೇಸಿಗೆ ಆಗಿದ್ದರಿಂದ ಜನ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. 

Advertisement

ಸಾಧ್ಯವಿದ್ದಲ್ಲಿ ಕೊಳವೆ ಬಾವಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಿ, ಹೊಸ ಕೊಳವೆ ಬಾವಿಗೆ ಅವಕಾಶ ಇದ್ದಲ್ಲಿ ಕೊಳವೆ ಬಾವಿ ಕೊರೆಯಿಸಬೇಕು. ಇಲ್ಲವಾದಲ್ಲಿ ಪರ್ಯಾಯ ಮಾರ್ಗ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಪ್ರಗತಿಯನ್ನು ಪರಿಶೀಲನೆ ಮಾಡಿದ ಶಾಸಕರು ಎಸ್‌ಸಿಪಿ ಟಿಎಸ್‌ಪಿ ಯೋಜನೆಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

ನಗನೂರ, ಮಲ್ಲಾ (ಬಿ), ಖಾನಾಪುರ, ವಂದಗನೂರ ಮತ್ತು ಏವೂರ ಸೇರಿದಂತೆ ಇಲಾಖೆಯಿಂದ ಕೈಗೆತ್ತಿಕೊಂಡ ಎಚ್‌ಕೆಆರ್‌ ಡಿಬಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಂಡು ಬಾಕಿ ಕಾಮಗಾರಿಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.

ಜಿಪಂ (ಇಂಜಿನಿಯರ್‌) ಇಲಾಖೆಯಡಿ ಕೈಗೊಳ್ಳಲಾದ 34 ಕಾಮಗಾರಿಗಳಲ್ಲಿ 10 ಮಾತ್ರ ಪೂರ್ಣವಾಗಿದ್ದು, ಶೀಘ್ರ ಗ್ರಾಮಗಳ ರಸ್ತೆ ಡಾಂಬರೀಕರಣ, ಸಿಸಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಯಾವುದೇ ಹಣಕಾಸಿನ ನೆಪದಲ್ಲಿ ಕಾಮಗಾರಿ ನಿಲ್ಲಿಸಬೇಡಿ.

ಹಲವಾರು ಗ್ರಾಮಗಳಲ್ಲಿ ಇನ್ನೂ ಟೆಂಡರ ಕರೆದರೂ ಕಾಮಗಾರಿ ಪ್ರಾರಂಭ ಮಾಡಿರುವುದಿಲ್ಲ. ಅಂತಹ ಕಾಮಗಾರಿ ಗುತ್ತಿಗೆ ಪಡೆದ ಗುತ್ತೇದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿ, ಕಾಮಗಾರಿ ಆರಂಭಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ನಿರ್ಮಿತಿ ಕೇಂದ್ರ, ಭೂ ಸೇನಾ ಜಿಪಂ ಇಲಾಖೆಗಳಲ್ಲಿ ಕೈಗೆತ್ತಿಕೊಂಡ ಎಚ್‌ಕೆಆರ್‌ಡಿಬಿ ಮತ್ತು ಎಸ್‌ಎಫ್‌ಸಿ ಮುಖ್ಯಮಂತ್ರಿಗಳ ಅನುದಾನ, ಶಾಸಕರ ಅನುದಾನ ಹಲವಾರು ಯೋಜನಾ ಅನುದಾನಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಲ್ಲಿ ಗ್ರಾಮ ಅಭಿವೃದ್ಧಿಗೆ ಸಾಧ್ಯವಾಗಲಿದೆ. ಕಾರಣ ಅಧಿಕಾರಿಗಳು ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ತಾಪಂ ಅಧ್ಯಕ್ಷ ಬಸವಂತರಡ್ಡಿ ಸಾಹು ಹತ್ತಿಗೂಡೂರ, ತಾಪಂ ಇಒ ಇದ್ದರು. ತಾಪಂ ಎಇಇ, ಜೆಇ ಸೇರಿದಂತೆ ಸುರಪುರ- ಶಹಾಪುರ ತಾಲೂಕುಗಳ ಭೂ ಸೇನಾ ನಿಗಮ ಅಧಿಕಾರಗಳು ಮತ್ತು ಇತರೆ ಸಿಬ್ಬಂದಿ, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next