ಗದಗ: ವಿಜ್ಞಾನ ಮತ್ತು ತಾಂತ್ರಿಕತೆ ಸಾಕಷ್ಟು ಮುಂದುವರಿದಿದ್ದು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ವಿಜ್ಞಾನ ಸಂಶೋಧನೆಯಲ್ಲಿ ತೊಡಗಬೇಕು ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಅರವಿಂದಸಿಂಗ್ ಬ್ಯಾಳಿ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನ ಪ್ರಯುಕ್ತ ನಗರದ ಅಬ್ರಾರ ಮತ್ತು ಅಲೀ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗಳಾಗಿವೆ. ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆದರ್ಶ ವಿದ್ಯಾರ್ಥಿಯಾಗಬೇಕು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಡಾ| ಆರ್.ಬಿ. ಉಪ್ಪಿನ, ನಿಕಟಪೂರ್ವ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖೀ ಕಾರ್ಯದಲ್ಲಿ ತೊಡಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪುರಸ್ಕಾರ ನೀಡುವ ಮೂಲಕ ಕಲಿಕಾ ಸಾಮಗ್ರಿ ನೀಡುತ್ತಿದೆ ಎಂದು ತಿಳಿಸಿದರು.
ಗದಗ ಬಿಇಒ ಕಾರ್ಯಾಲಯದ ಅಧೀಕ್ಷಕಿ ಪ್ರತಿಭಾ ಕುಲಕರ್ಣಿ, ಶಿಕ್ಷಕ ಶಫಿಅಹ್ಮದ್ ಯರಗುಡಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕೈಗೊಂಡ ಪ್ರಯೋಗಗಳು ಅವರ ಕ್ರಿಯಾಶೀಲತೆ, ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದರು. ಎಂ.ಜಿ. ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮಹ್ಮದಸಾಬ್ ಬೋದೆಖಾನ್, ಕಾರ್ಯದರ್ಶಿ ಅಬ್ದುಲ್‌ಗಫೂರಸಾಬ್, ಫಾರೂಕ್ ಮುಲ್ಲಾ, ಪಕ್ರುದ್ದೀನ್ ದಂಡಿನ, ಮೌಲಾನಾ ಝಕ್ರಿಯಾ ಖಾಜಿ ಉಪಸ್ಥಿತರಿದ್ದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ
ಜೈದಖಾನ್ ಲೋದಿ, ಸೂಫಿಯಾ ಖಾಜಿ, ರುಮಾನ್ ಖಾಜಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.