Advertisement

ಇದು ದೇಶದ ಅತ್ಯಂತ ಅಪಾಯಕಾರಿ ಕೋಟೆ… ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ

06:55 PM Jul 15, 2023 | ಸುಧೀರ್ |

ಕೋಟೆ ಎಂದರೆ ನಾನಾ ರೀತಿಯಲ್ಲಿ ಇರುತ್ತದೆ ಹಳೆಯ ರಾಜರುಗಳ ಕಾಲದಲ್ಲಿ ನಿರ್ಮಿಸಿದ ಕೋಟೆಗಳೇ ಇಂದು ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ಅಂದಿನ ರಾಜರು ತಮ್ಮ ಪ್ರದೇಶವನ್ನು ಉಳಿಸಿಕೊಳ್ಳಲು ಕಳ್ಳ ಕಾಕರಿಂದ, ಎದುರಾಳಿಗಳಿಂದ ತಮ್ಮ ರಾಜ್ಯವನ್ನು ರಕ್ಷಿಸಲು ಈ ಕೋಟೆಗಳನ್ನು ನಿರ್ಮಾಣ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Advertisement

ಅದೇ ಕೋಟೆಗಳು ಇಂದು ಅದೆಷ್ಟೋ ಪ್ರವಾಸಿ ಪ್ರೀಯರಿಗೆ ನೆಚ್ಚಿನ ತಾಣಗಳಾಗಿ ಮಾರ್ಪಾಡು ಹೊಂದಿದೆ ಅದರಲ್ಲೂ ಕೆಲವೊಂದು ಕೋಟೆಗಳು ಯಾವ ರೀತಿ ನಿರ್ಮಾಣ ಮಾಡಲಾಗಿದೆ ಎಂದರೆ ನಾವು ಊಹಿಸಲೂ ಸಾಧ್ಯವಿರದ ಅತ್ಯಂತ ಭಯಾನಕ ರೀತಿಯಲ್ಲಿ ನಿರ್ಮಾಣಮಾಡಲಾಗಿರುತ್ತದೆ.

ಮಹಾರಾಷ್ಟ್ರದ ಬಳಿಯೊಂದು ಕೋಟೆ ಇದೆ, ದೂರದಲ್ಲಿ ನೋಡುವಾಗ ಆ ಕೋಟೆ ಆಕಾಶಕ್ಕೆ ಹತ್ತಿರವಾಗಿ ಕಾಣುತ್ತದೆ, ಅದೇ ಕೋಟೆಯ ಮೇಲೆ ನಿಂತು ನೋಡಿದರೆ ಜೀವವೇ ಒಮ್ಮೆ ಹೋಗಿ ಬಂದಂತಾ ಅನುಭವ. ಅಂದಹಾಗೆ ಈ ಕೋಟೆಯನ್ನು ಹತ್ತಲು ಎರಡು ಗುಂಡಿಗೆ ಬೇಕು ಇದು ಮಾತ್ರ ಸತ್ಯ, ಟ್ರಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಕೋಟೆ, ಸಾಹಸ ಪ್ರಿಯರಿಗೂ ಸೂಕ್ತವಾದ ಸ್ಥಳ.

ಅಂದಹಾಗೆ ನಾವೀಗ ಹೇಳ ಹೊರಟಿರುವ ಕೋಟೆ ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಕೋಟೆ, ಇದಕ್ಕೆ ಪ್ರಬಲ್ಗಡ್ ಕೋಟೆ ಎಂದೂ ಕರೆಯುತ್ತಾರೆ ಇದು ಮಹಾರಾಷ್ಟ್ರದ ಮಾಥೆರಾನ್ ಮತ್ತು ಪನ್ವೆಲ್ ಬೆಟ್ಟಗಳ ಮಧ್ಯೆ ಕಾಣಸಿಗುವ ಕೋಟೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2,300 ಅಡಿ ಎತ್ತರವಿರುವ ಈ ಕೋಟೆ ಹಲವು ಶತಮಾನ ಹಳೆಯದು ಎನ್ನಲಾಗಿದೆ.

Advertisement

ಮುಖ್ಯವಾಗಿ ಈ ಕೋಟೆಯ ಬಗ್ಗೆ ಹೇಳಬೇಕೆಂದರೆ ಕೋಟೆಯ ಮಾರ್ಗವು ಕ್ಲಿಷ್ಟಕರವಾಗಿದೆ ಅಲ್ಲದೆ ಈ ಕೋಟೆ ಹತ್ತಬೇಕಾದರೆ ಧೈರ್ಯ ಬೇಕು ಬೇರೆ ಕೋಟೆಗಳಂತಲ್ಲ ಈ ಕೋಟೆ ಬಂಡೆ ಕಲ್ಲಿನ ಅಂಚನ್ನೇ ಕೆತ್ತಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದಂತಿದೆ ಅಲ್ಲದೆ ಇಲ್ಲಿ ಕೋಟೆ ಹತ್ತುವಾಗ ಆಧಾರಕ್ಕೆ ಹಿಡಿಯಲು ಯಾವುದೇ ವ್ಯವಸ್ಥೆ ಇಲ್ಲ ಬಂಡೆ ಕಲ್ಲುಗಳನ್ನೇ ಆಧಾರವಾಗಿ ಹಿಡಿದು ಕೋಟೆ ಹತ್ತಬೇಕು, ಹತ್ತುವಾಗ ಏನೋ ಧೈರ್ಯದಲ್ಲಿ ಹತ್ತಿದರೆ ಅದೇ ಕೆಳಗೆ ಇಳಿಯಬೇಕಾದರೆ ಕೋಟೆಯ ಬುಡವೇ ಕಾಣುವುದಿಲ್ಲ ಮೈಯೆಲ್ಲಾ ಬೆವರಿ ಒದ್ದೆಯಾಗುವ ಅನುಭವವಾಗುತ್ತದೆ ಅಷ್ಟು ಮಾತ್ರವಲ್ಲದೆ ಸ್ವಲ್ಪ ಯಾಮಾರಿದರೂ ದೇವರೇ ಗತಿ ಎಂಬಂತಿದೆ.

ಕೋಟೆಯ ಇತಿಹಾಸ:
ಬಹುಮನಿ ಸುಲ್ತಾನರ ಕಾಲದಲ್ಲಿ ಪನ್ವೇಲ್‌ ಹಾಗೂ ಕಲ್ಯಾಣ್‌ ಕೋಟೆಗಳ ಮೇಲೆ ಕಣ್ಣಿಡಲು ಈ ಕೋಟೆಯನ್ನು ಕ್ರಿ.ಶ 1458 ರಲ್ಲಿ ನಿರ್ಮಿಸಲಾಯಿತು. ಒಂದು ಕಾಲದಲ್ಲಿ ಈ ಕೋಟೆಯನ್ನು ಮುರಂಜನ್‌ ಕೋಟೆ ಎಂದು ಕರೆಯಲಾಗುತ್ತಿತ್ತು. ಕಾಲಾನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಕೋಟೆಯ ಹೆಸರು ಮರುನಾಮಕರಣ ಮಾಡಿ ಕೋಟೆಗೆ ರಾಣಿ ಕಲಾವಂತಿಯ ಹೆಸರನ್ನು ಇಟ್ಟರು ಎಂದು ಹೇಳಲಾಗುತ್ತಿದೆ.

ಯಾಮಾರಿದ್ರೆ ಅಪಾಯ ಗ್ಯಾರಂಟಿ
ಈ ಕೋಟೆಯನ್ನು ಹತ್ತಲು ಎರಡು ಗುಂಡಿಗೆ ಬೇಕು ಕಲ್ಲು ಬಂಡೆಗಳಲ್ಲೇ ನಿರ್ಮಿಸಿದ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಮೇಲೆ ಹೋಗಬೇಕು ಹಾಗೆಯೇ ಕೋಟೆಯಿಂದ ಇಳಿಯುವಾಗ ಕೋಟೆಯ ಮೇಲಿಂದ ಕೆಳಗೆ ನೋಡುವಾಗ ತಲೆ ಸುತ್ತು ಬರುತ್ತದೆ, ಜಾಗ್ರತೆ ಅತೀ ಅಗತ್ಯ, ಒಂದು ಚೂರು ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ, ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಕೆಲವರು ಅಜಾಗರೂಕತೆಯಿಂದ ಜೀವವನ್ನೇ ಕಳೆದುಕೊಂಡ ನಿದರ್ಶನಗಳೂ ಇವೆ.

ರಾತ್ರಿ ಉಳಿಯುವ ಹಾಗಿಲ್ಲ
ಈ ಕೋಟೆಗೆ ಚಾರಣಕ್ಕೆ ಬಂದವರು ರಾತ್ರಿಯಾಗುವುದರೊಳಗೆ ಕೆಳಗೆ ಇಳಿಯಬೇಕು ಇಲ್ಲವಾದರೆ ಕತ್ತಲಲ್ಲಿ ಇಲ್ಲಿ ಕೆಳಗೆ ಇಳಿಯುವುದು ಕಷ್ಟ, ಒಂದು ವೇಳೆ ಕತ್ತಲಾಯಿತು ಇಲ್ಲೇ ಇದ್ದು ಬೆಳಗ್ಗೆ ಕೆಳಗೆ ಇಳಿಯುವ ಸಾಹಸ ಮಾಡಿದರೆ ಅಪಾಯವೂ ಕಟ್ಟಿಟ್ಟ ಬುತ್ತಿ. ರಾತ್ರಿ ಹೊತ್ತು ಇಲ್ಲಿ ಯಾರೋ ಒಬ್ಬರು ಮಹಿಳೆ ಕೂಗುವ ಸದ್ದು ಕೇಳುತ್ತಂತೆ ಈ ಹಿಂದೆ ಇಲ್ಲಿ ಉಳಿದುಕೊಂಡ ಕೆಲವರು ಈ ಅನುಭವನ್ನು ಅನುಭವಿಸಿದ್ದಾರೆ ಎನ್ನತ್ತಾರೆ. ಅಲ್ಲದೆ ಕೆಲವೊಂದು ವಿಚಿತ್ರ ಸದ್ದುಗಳು ಇಲ್ಲಿ ಕೇಳಲ್ಪಡುತ್ತದೆ ಎನ್ನಲಾಗಿದೆ. ಹಾಗಾಗಿ ಇಲ್ಲಿನ ಆಡಳಿತ ಈ ಕೋಟೆಯಲ್ಲಿ ರಾತ್ರಿ ಉಳಿಯಬಾರದೆಂದು ನಿರ್ಬಂಧ ಹೇರಿದೆ.

ಮಳೆಗಾಲದಲ್ಲಿ ಅಪಾಯ ಹೆಚ್ಚು:
ಮಳೆಗಾಲದಲ್ಲಿ ಈ ಕೋಟೆ ನೋಡಲು ಸುಂದರವಾಗಿ ಕಾಣುತ್ತದೆಯಾದರೂ ಕೋಟೆ ಹತ್ತುವ ಪ್ರಯತ್ನ ಮಾಡಬೇಡಿ ಮಳೆಗಾಲದಲ್ಲಿ ಇಲ್ಲಿನ ಮೆಟ್ಟಿಲುಗಳು ಪಾಚಿ ಹಿಡಿದು ಜಾರುವುದರಿಂದ ಅಪಾಯ ಹೆಚ್ಚು ಹಾಗಾಗಿ ಬೇಸಿಗೆ ಕಾಲದಲ್ಲಿ ಚಾರಣ ಮಾಡಬಹುದು, ಮಳೆಗಾಲದಲ್ಲಿ ದೂರದಲ್ಲೇ ಕೋಟೆ ನೋಡಲು ಚಂದ.

ಇಲ್ಲಿಗೆ ಬರುವುದು ಹೇಗೆ:
ರೈಲಿನ ಮೂಲಕ ಬರುವವರು ನವಿ ಮುಂಬೈ ಹಾಗೂ ಮುಂಬೈನಿಂದ ಬರುವವರು ಪನ್ವೆಲ್ ರೈಲು ನಿಲ್ದಾಣದಲ್ಲಿ ಇಳಿದು ಬಳಿಕ ರಿಕ್ಷಾ ಅಥವಾ ಕಾರಿನ ಮೂಲಕ ಇಲ್ಲಿಗೆ ಬರಬಹುದು.

ಪ್ರವೇಶ ಶುಲ್ಕ ಇಲ್ಲ:
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಈ ಕೋಟೆಯ ಬುಡದ ವರೆಗೆ ವಾಹನದ ಮೂಲಕ ತಲುಪಬಹುದು. ಅಲ್ಲಿಂದ ನಡಿಗೆ ಮೂಲಕ ಕೋಟೆ ಹತ್ತಬೇಕು, ಇಲ್ಲಿ ಪ್ರವಾಸಿಗರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ತಮ್ಮ ತಮ್ಮ ಜೀವದ ಮೇಲೆ ಎಚ್ಚರ ಇದ್ದರೆ ಸಾಕು. ಪ್ರಕೃತಿಯ ಸೌಂದರ್ಯವನ್ನು ಸವಿದು ಸುರಕ್ಷಿತವಾಗಿ ಮನೆಗೆ ಮರಳಿ…

– ಸುಧೀರ್ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next