ನವದೆಹಲಿ: ದೇಶದಲ್ಲಿ ಕೂಡಲೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲಿದೆ. 2014ರ ಚುನಾವಣೆಗೆ ಹೋಲಿಕೆ ಮಾಡಿದರೆ ಎನ್‌ಡಿಎಗೆ ಕೊಂಚ ಸ್ಥಾನಗಳು ನಷ್ಟವಾಗಲಿವೆ ಎಂದು ಲೋಕನೀತಿ- ಸಿಎಸ್‌ಡಿಎಸ್- ಎಬಿಪಿ ನ್ಯೂಸ್ ನಡೆಸಿದ “ಮೂಡ್ ಆಫ್ ದ ನೇಶನ್’ ಸಮೀಕ್ಷೆ ಹೇಳಿದೆ.
2018ರ ಜನವರಿಯಿಂದ ದೇಶದ 19 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಪೂರ್ವ ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ. ಇಲ್ಲಿನ ಒಟ್ಟು 142 ಸ್ಥಾನಗಳ ಪೈಕಿ ಎನ್‌ಡಿಎಗೆ 86-94, ಯುಪಿಎಗೆ 22-26, ಇತರರಿಗೆ 26-30 ಸ್ಥಾನ ಲಭಿಸಲಿವೆ. ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿಯೂ ಮೋದಿ ಹವಾ ಮಾಸಿಲ್ಲ. ಅಲ್ಲಿನ 118 ಸ್ಥಾನಗಳ ಪೈಕಿ ಎನ್‌ಡಿಎ 74, ಯುಪಿಎ 44 ಸ್ಥಾನಗಳಲ್ಲಿ ಜಯ ಸಾಧಿಸಲಿವೆ.
ಗುಜರಾತ್‌ನಲ್ಲಿ ಎನ್‌ಡಿಎಗೆ ಶೇ.54 ರಷ್ಟು, ಯುಪಿಎಗೆ ಶೇ.42, ಇತರರಿಗೆ ಶೇ.4ರಷ್ಟು ಮತಗಳು ಸಿಗಲಿವೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೇಲುಗೈ ಸಾಧಿಸಲಿದೆ. ಆಡಳಿತಾರೂಢ ಮೈತ್ರಿ ಕೂಟಕ್ಕೆ ಶೇ.48, ಯುಪಿಎಗೆ ಶೇ.40ರಷ್ಟು ಮತ ದೊರಕಲಿವೆ. ಬಿಜೆಪಿ-ಶಿವಸೇನೆ ಭಿನ್ನಾಭಿಪ್ರಾಯ ಇರುವುದರಿಂದ ಮೈತ್ರಿ ಕಾಪಿಡಲು ಸಿಎಂ ಫಡ್ನವೀಸ್ ಇನ್ನಿಲ್ಲದ ಪ್ರಯತ್ನ ನಡೆಸಬೇಕಾದೀತು. ಹಿಂದಿನ ಚುನಾವಣೆಯಲ್ಲಿ ಎನ್‌ಡಿಎ ಬುಟ್ಟಿಗೆ ಶೇ.51ರಷ್ಟು ಮತಗಳು ಬಿದ್ದಿದ್ದವು. ಕಾಂಗ್ರೆಸ್-ಆರ್‌ಜೆಡಿ ಮಹಾ ಮೈತ್ರಿ ಯಿಂದ ಹೊರ ಬಂದು ಸರಕಾರ ರಚಿಸಿರು ವುದಕ್ಕೆ ಬಿಹಾರ ಮತದಾರರು ಸಂತುಷ್ಟರಾ ಗಿದ್ದಾರೆ. ಬಿಜೆಪಿ-ಜೆಡಿಯು ಹೆಚ್ಚಿನ ಸ್ಥಾನ ಗೆಲ್ಲಲಿವೆ. ಇದು ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟಕ್ಕೆ ಆಘಾತ ತಂದೊಡ್ಡಲಿದೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟಕ್ಕೆ ಶೇ.46ರಷ್ಟು ಮತಗಳು ಸಿಗಲಿವೆ. ಕಳೆದ ಚುನಾವಣೆಗೆ ಹೋಲಿಸಿ ದರೆ ಶೇ.4ರಷ್ಟು ವೃದ್ಧಿಯಾಗಲಿದೆ. ಎನ್‌ಡಿಎಗೆ ಶೇ.35ರಷ್ಟು ಮತಗಳು ಬರಲಿವೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿಗೆ ಸವಾಲಿನ ಪರಿಸ್ಥಿತಿ ಇರುವ ಸಾಧ್ಯತೆಗಳಿವೆ. ದಕ್ಷಿಣ ಭಾರತದಲ್ಲಿನ 132 ಸ್ಥಾನಗಳ ಪೈಕಿ ಎನ್‌ಡಿಎಗೆ 18-22, ಯುಪಿಎಗೆ 67- 75, ಇತರರಿಗೆ 38-44 ಸ್ಥಾನ ಲಭಿಸಲಿವೆ.
ಶೇ.49 ಅಂಕ
“ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿ 4 ವರ್ಷಗಳ ಮೋದಿ ನೇತೃತ್ವದ ಸರಕಾರದ ಸಾಧನೆ ಬಗ್ಗೆ ಸಮೀಕ್ಷೆ ನಡೆಸಿದೆ. ಅದರಲ್ಲಿ ಶೇ.49 ಮಂದಿ ಉತ್ತಮ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹಾಲಿ ಪ್ರಧಾನಿಯೇ ಗೆದ್ದು ಮುಂದುವರಿಯಬೇಕು ಎಂದು ಶೇ.53 ಮಂದಿ ಅಭಿಪ್ರಾಯ ಹೊಂದಿ ದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗೆ ಶೇ.23ರಷ್ಟು ಬೆಂಬಲ ವ್ಯಕ್ತವಾಗಿದೆ. ಧಾರ್ಮಿಕ ಸಾಮರಸ್ಯ ಸುಧಾರಿಸಿದೆ ಎಂದು ಶೇ.30ರಷ್ಟು ಮಂದಿ ಹೇಳಿದರೆ, ಶೇ.32ರಷ್ಟು ಮಂದಿ ಸ್ಥಿರವಾಗಿದೆ ಎಂದೂ, ಶೇ.23 ಮಂದಿ ಕೆಟ್ಟುಹೋಗಿದೆ ಎಂದೂ ಹೇಳಿದ್ದಾರೆ.