Advertisement

ಜೀವಜಲ ಸಂರಕ್ಷಣೆಗೆ ಮುಂದಾಗಿ

11:16 AM Jul 16, 2019 | Suhan S |

ಚಿಕ್ಕಮಗಳೂರು: ಪ್ರತಿ ಹನಿ ನೀರು ಸಂಗ್ರಹಿಸುವುದರ ಮೂಲಕ ಜೀವಜಲವನ್ನು ಮುಂದಿನ ಪೀಳಿಗೆಗಾಗಿ ಕಾಪಾಡಬೇಕಾಗಿದೆ. ಈ ಕುರಿತು ಜನರಲ್ಲಿ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅಂಕಿ-ಅಂಶಗಳ ಸಲಹೆಗಾರ ಜೇಮ್ಸ್‌ ಮ್ಯಾಥ್ಯು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಲಶಕ್ತಿ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಾರಂಪರಿಕ ಜಲ ಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲ ಸಂರಕ್ಷಣೆ, ಜಲ ಮರುಪೂರಣ, ಅರಣ್ಯೀಕರಣ ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ದೇಶಾದ್ಯಂತ ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ ರಾಜ್ಯದ 18 ಜಿಲ್ಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಸೇರಿದೆ. ಜಿಲ್ಲೆಯ ಕಡೂರು ತಾಲೂಕನ್ನು ಜಲ ಸಂರಕ್ಷಣೆ ಯೋಜನೆಗೆ ಸೇರಿಸಲಾಗಿದೆ ಎಂದು ತಿಳಿಸಿದರು.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಕೆರೆಗಳನ್ನು ಶುದ್ಧೀಕರಣಗೊಳಿಸಬೇಕು. ಬಹುಕಮಾನಿನ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ನೀರನ್ನು ತಡೆಹಿಡಿಯಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಇದನ್ನು ಮಾಡಬಹುದು. ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದನ್ನು ಮಾಡಲು ಅವಕಾಶವಿದೆ. ಈ ಕುರಿತು ಯೋಜನೆಗಳನ್ನು ರೂಪಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

Advertisement

ಅಂತರ್ಜಲ ಕುಸಿತದಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಾಗಿದೆ. ಭವಿಷ್ಯದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಆತಂಕ ಇರುವುದರಿಂದ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ನೀರಿನ ಮೂಲಗಳನ್ನು ಸರಿಪಡಿಸಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಕೂಟಗಳನ್ನು ಆಯೋಜಿಸಬೇಕು. ನೀರಿನ ಸಂರಕ್ಷಣೆ ಕುರಿತು ಅಭಿಯಾನ ಆಯೋಜಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಜಿಲ್ಲೆಯಲ್ಲಿ ಜಲ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಹೆಚ್ಚುವರಿ ಅಭಿಯಂತರ ಸುಶೀಲ್ ಖಜೂರಿಯಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಅಶ್ವತಿ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next