Advertisement

Result; ಪಿಯುಸಿಯಲ್ಲಿ ಮುಂದುವರಿದ ವಿದ್ಯಾರ್ಥಿನಿಯರ ಪಾರಮ್ಯ

11:13 PM Apr 10, 2024 | Team Udayavani |

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-1ರಲ್ಲಿ ವಿದ್ಯಾರ್ಥಿನಿಯರ ಪಾರಮ್ಯ ಮುಂದುವರಿದಿದೆ. ಹಾಗೆಯೇ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಪ್ರದರ್ಶನ ಈ ಬಾರಿ ನೀರಸವಾಗಿದೆ!

Advertisement

ಈ ಬಾರಿ 3,59,612 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 3,05,212 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ. 84.87 ಫ‌ಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 80.25 ಫ‌ಲಿತಾಂಶ ಬಂದಿತ್ತು. 3,21,467 ಬಾಲಕರು ಪರೀಕ್ಷೆ ಬರೆದಿದ್ದು 2,47,478 ಮಂದಿ ತೇರ್ಗಡೆಯಾಗಿ ಶೇ. 76.98 ಫ‌ಲಿತಾಂಶ ಬಂದಿದೆ. ಕಳೆದ ವರ್ಷ ಶೇ. 69.05 ಫ‌ಲಿತಾಂಶ ಬಂದಿತ್ತು. ಈ ವರ್ಷದ ಲಿಂಗವಾರು ಫ‌ಲಿತಾಂಶ ಗಮನಿಸಿದರೆ ಬಾಲಕರಿಗಿಂತ ಬಾಲಕಿಯರ ಉತ್ತೀರ್ಣ ಪ್ರಮಾಣ ಸುಮಾರು ಶೇ. 8ರಷ್ಟು ಹೆಚ್ಚಿದೆ.

ಇನ್ನು ನಗರ ಭಾಗದಿಂದ 5,32,727 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 4,32,060 ವಿದ್ಯಾರ್ಥಿಗಳು ಅಂದರೆ ಶೇ. 81.10 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ ಗ್ರಾಮೀಣ ಭಾಗದಿಂದ 1,48,350 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1,20,630 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.81.31ರ ಸಾಧನೆ ಗೈದಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 0.21ರಷ್ಟು ಉತ್ತಮವಾಗಿದೆ.

ಕನ್ನಡ ಮಾಧ್ಯಮ ಸಾಧನೆ
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,87,727 ವಿದ್ಯಾರ್ಥಿಗಳ ಪೈಕಿ 1,83,221 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ 4,14,340 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,40,988 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 82.30ರಷ್ಟು ಫ‌ಲಿತಾಂಶ ಬಂದಿದೆ. ಕನ್ನಡ ಮಾತೃಭಾಷೆಯಾಗಿದ್ದು, ಪರೀಕ್ಷೆಯಲ್ಲಿ ಮಾತ್ರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ನಿರೀಕ್ಷಿತ ಫ‌ಲಿತಾಂಶ ಗಳಿಸದಿರುವುದು ಬೇಸರದ ಸಂಗತಿ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಹಾಗಂತ, ವಿದ್ಯಾರ್ಥಿಗಳನ್ನು ನಾವು ದೂರುವಂತಿಲ್ಲ. ಕನ್ನಡದಲ್ಲಿ ಪರೀಕ್ಷೆ ಬರೆಯುವವರು ಹೆಚ್ಚಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿರುತ್ತಾರೆ. ಆ ವಿಭಾಗಗಳ ಫ‌ಲಿತಾಂಶ ಕ್ರಮವಾಗಿ ಶೇ. 61.22 ಮತ್ತು 75.89 ಆಗಿದೆ. ಇನ್ನು ಇದರಲ್ಲಿ ಲೆಕ್ಕಹಾಕಿದರೆ, ಕೆಲ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುತ್ತಾರೆ. ಇನ್ನು ವಿಜ್ಞಾನ ವಿಭಾಗದ ಫ‌ಲಿತಾಂಶ ಶೇ. 85.71 ಆಗಿದೆ. ಇದರಲ್ಲಿ ಬಹುತೇಕರು ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆದಿರುತ್ತಾರೆ. ಇದು ವಾಸ್ತವವಾಂಶ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

469 ಕಾಲೇಜಿನ ಎಲ್ಲರೂ ಉತ್ತೀರ್ಣ
91 ಸರ್ಕಾರಿ ಪಿಯು ಕಾಲೇಜುಗಳು ಸೇರಿದಂತೆ ಒಟ್ಟು 469 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ಮಕ್ಕಳೂ ಉತ್ತೀರ್ಣರಾಗಿ ಶೇ.100 ಫ‌ಲಿತಾಂಶ ದಾಖಲಾಗಿದೆ. ಇನ್ನು 35 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗದೆ ಶೂನ್ಯ ಫ‌ಲಿತಾಂಶ ದಾಖಲಾಗಿದೆ. 312 ದೃಷ್ಠಿ ದೋಷದ ವಿದ್ಯಾರ್ಥಿಗಳು ಸೇರಿ 1,192 ಮಂದಿ ವಿವಿಧ ವಿಶೇಷ ಚೇತನ ಮಕ್ಕಳು ಉತ್ತೀರ್ಣರಾಗಿ¨ªಾರೆ.

ಸರಕಾರಿ ಕಾಲೇಜು: ಶೇ. 75 ಫ‌ಲಿತಾಂಶ
ಸರ್ಕಾರಿ ಕಾಲೇಜಿನಲ್ಲಿ ಶೇ.75.29, ಅನುದಾನಿತ ಕಾಲೇಜಿನಲ್ಲಿ ಶೇ.79.82, ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿ ಶೇ.90.46, ಬಿಬಿಎಂಪಿ ಕಾಲೇಜುಗಳಲ್ಲಿ ಶೇ.76.88 ಮತ್ತು ವಿಭಜಿತ ಕಾಲೇಜುಗಳಲ್ಲಿ ಶೇ.86.76 ರಷ್ಟು ಫ‌ಲಿತಾಂಶ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next