Advertisement

ಕೊಡಗಿನಲ್ಲಿ ಮುಂದುವರಿದ ಆಶ್ಲೇಷಾ ಆರ್ಭಟ; ರಸ್ತೆ ಸಂಪರ್ಕ ಕಡಿತ; ಹಲವೆ‌ಡೆ ಭೂಕುಸಿತ

08:11 AM Aug 08, 2020 | mahesh |

ಮಡಿಕೇರಿ: ಜಿಲ್ಲೆಯಲ್ಲಿ ಆಶ್ಲೇಷಾ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಕಡೆ ಭೂಕುಸಿತ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ ನೂರಾರು ಮನೆಗಳು ಜಲಾವೃತಗೊಂಡು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ತಲಕಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗು ತ್ತಿರುವುದರಿಂದ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾದ ಐವರ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

Advertisement

ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ದುರಂತ ನಡೆದ ಪ್ರದೇಶಕ್ಕೆ ತೆಗೆದು ಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾಗಿ ಪ್ರವಾಹದ ನೀರು ತಗ್ಗಿದರೆ ಶನಿವಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಸಚಿವ ಸೋಮಣ್ಣ ಭೇಟಿ
ಬ್ರಹ್ಮಗಿರಿ ಬೆಟ್ಟ ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಭೂ ಕುಸಿತ ಪ್ರದೇಶ ಕಂಡು ನೋವು ವ್ಯಕ್ತಪಡಿಸಿದ ಸಚಿವರು, ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್‌ ಕುಟುಂಬದ ಮೂವರು ಮತ್ತು ಸಹ ಅರ್ಚಕರಿಬ್ಬರ ಸೇರಿ, ಒಟ್ಟು 5 ಮಂದಿ ಕಣ್ಮರೆಯಾಗಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಕಾರ್ಯಾಚರಣೆ ಆರಂಭಿಸಲಾಗುವುದು. ಈಗಾಗಲೇ ಎನ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದೆ ಎಂದು ತಿಳಿಸಿದರು.  ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಎನ್‌ಡಿಆರ್‌ಎಫ್ ತಂಡ ಜಿಲ್ಲೆಯಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾಗೆಯೇ ವಿದ್ಯುತ್‌ ಮಾರ್ಗ ಸರಿಪಡಿಸುವುದು, ಮರಗಳು ರಸ್ತೆ ಮತ್ತು ವಿದ್ಯುತ್‌ ಕಂಬ ತುಂಡಾಗಿ ಬದ್ದಲ್ಲಿ ತತ್‌ಕ್ಷಣವೇ ತೆರವು ಮಾಡುವ ಕಾರ್ಯ ನಡೆಯುತ್ತಿದೆ ಎಂದು ವಿ. ಸೋಮಣ್ಣ ಅವರು ವಿವರಿಸಿದರು.

ಪ್ರಕೃತಿ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ. ಮುಖ್ಯಮಂತ್ರಿ ಅವರು ಯಾವುದೇ ತೊಂದರೆ ಆಗದಂತೆ ಗಮನ ಹರಿಸಬೇಕೆಂದು ಸೂಚಿಸಿದ್ದಾರೆ. ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸಹಿತ ಇತರ ಅಪಾಯಕಾರಿ ಸ್ಥಳದಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದರು.

ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ ಅಪ್ಪಚ್ಚು ರಂಜನ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌ ಉಪಸ್ಥಿತರಿದ್ದರು.

Advertisement

ಬೋಟ್‌ ಬಳಕೆ
ತ್ರಿವೇಣಿ ಸಂಗಮ ಪ್ರದೇಶವು ಸಂಪೂರ್ಣ ಮುಳು ಗಡೆಯಾಗಿದ್ದು, ಭಾಗಮಂಡಲದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ತಲಕಾವೇರಿಯ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಬೋಟ್‌ ಮೂಲಕ ಭಾಗಮಂಡಲದ ಮತ್ತೂಂದು ಬದಿ ತಲಪಿದ ಸಚಿವ ಸೋಮಣ್ಣ ಹಾಗೂ ಇತರರು ರಸ್ತೆ ಮಾರ್ಗವಾಗಿ ತಲಕಾವೇರಿಗೆ ತೆರಳಿದರು. ತಲಕಾವೇರಿ ಭೂ ಕುಸಿತ ಪ್ರದೇಶ ವೀಕ್ಷಣೆ ಅನಂತರ ಭಾಗಮಂಡಲದಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.
ಪ್ರವಾಹ ಎದುರಿಸಲು ಸಜ್ಜು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ಇಲಾಖೆ ಸಂಪೂರ್ಣ ಸಜ್ಜುಗೊಂಡಿದೆ.

ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ
ಪ್ರಧಾನ ಅರ್ಚಕರು ಅಧಿಕಾರಿಗಳ ಮಾತನ್ನು ಕೇಳಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಕಳೆದ ಬಾರಿ ತೋರಾದಲ್ಲಿ ಆದಂತೆಯೇ ಇಲ್ಲಿಯೂ ಅನಾಹುತ ಆಗಿದೆ. ಈಗಾಗಲೇ ಪರಿಹಾರ ಕೇಂದ್ರಗಳಿಗೆ ಜನರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ. ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಬಂದವರನ್ನು ಪರಿಹಾರ ಕೇಂದ್ರದಲ್ಲಿ ಇರಿಸುತ್ತೇವೆ. ಪಾಸಿಟಿವ್‌ ಬಂದರೆ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಣ ಮುಖ್ಯ ಅಲ್ಲ, ಜನರ ಜೀವ ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ವಿ.ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next