Advertisement

ಕಬ್ಬು ಬೆಳೆಗಾರರಿಗೆ ಮುಂಗಡ ಸಾಲದ ಆಮಿಷ

04:46 PM Nov 27, 2020 | Adarsha |

ಹಾವೇರಿ: ಕಬ್ಬು ಬೆಳೆಗಾರರಿಗೆ ಮುಂಗಡ ಸಾಲ ನೀಡುವ ಆಮಿಷವೊಡ್ಡಿ, ತಾವು ಬೆಳೆದ ಕಬ್ಬನ್ನು ಬೇರೆಡೆಗೆ ಮಾರಾಟ ಮಾಡಿದರೆ ದಂಡ ವಿ ಧಿಸುವ ನಿಬಂಧನೆ ಹೇರಿ ತಾಲೂಕಿನ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಕಬ್ಬು ಬೆಳೆಗಾರರೊಂದಿಗೆ ಅನ ಧಿಕೃತವಾಗಿ ಒಪ್ಪಂದ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಕಾರ್ಖಾನೆಗೆ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿಗೆ ಕಬ್ಬು ಪೂರೈಕೆಗೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಒಪ್ಪಂದ ಪತ್ರದಲ್ಲಿನ ಕೆಲ ಷರತ್ತುಗಳಿಂದ ವರ್ಷಪೂರ್ತಿ ಕಷ್ಟಪಟ್ಟು, ಶ್ರಮ ವಹಿಸಿ ಬೆಳೆದ ಕಬ್ಬನ್ನು ತಮಗೆ ಬೇಕಾದ ಕಾರ್ಖಾನೆಗಳಿಗೆ ಮಾರಾಟ ಮಾಡುವಂತಿಲ್ಲ ಎಂಬ ಅಂಶ ಉಲ್ಲೇಖವಾಗಿದ್ದು ಕಬ್ಬು ಬೆಳೆಗಾರರು ಆಕ್ರೋಶಗೊಳ್ಳುವಂತೆ ಮಾಡಿದೆ.

ರೈತರಿಗೆ ಮಾರಕ: 2020-21ನೇ ಹಂಗಾಮಿನ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಕಬ್ಬು ಪೂರೈಕೆ ಮಾಡುವ ಹಾಗೂ ಕೊಳ್ಳಲು ಕಬ್ಬು ಬೆಳೆಗಾರರೊಂದಿಗೆ ಮಾಡಿಕೊಂಡ ಒಪ್ಪಂದ ಪತ್ರದಲ್ಲಿರುವಂತೆ ರೈತರು ಕಾರ್ಖಾನೆಗಾಗಿ ಕಾಯ್ದಿಟ್ಟ ಕ್ಷೇತ್ರದಲ್ಲಿನ ಕಬ್ಬನ್ನು 2021ರ ಫೆಬ್ರವರಿ ತಿಂಗಳಿಗಿಂತ ಮೊದಲೇ ನಮ್ಮ ಕಾರ್ಖಾನೆಗೆ ಆಗಲಿ ಅಥವಾ ಬೇರೆ ಕಾರ್ಖಾನೆ, ಏಜೆಂಟರಿಗೆ ಆಗಲಿ ಪೂರೈಸಿದರೆ ಅಂತಹ ಕಾಯ್ದಿಟ್ಟ ಪ್ರದೇಶಕ್ಕೆ ಪಡೆದಂತೆ ಮುಂಗಡ ಸಾಲದ ಹಣ ಹಾಗೂ ಬ್ಯಾಂಕ್‌ ವಿಧಿಸುವ ಬಡ್ಡಿ ಸಮೇತ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:ಗ್ರಾಮೀಣ ನಿವೇಶನ ರಹಿತರಿಗೆ ಸೂರು

ಅಲ್ಲದೆ ಕಾಯ್ದಿಟ್ಟ ಕ್ಷೇತ್ರಕ್ಕೆ ಎಕರೆಗೆ 5,000 ರೂ.ನಂತೆ ದಂಡ ಸಹ ರೈತನೇ ಭರಿಸಬೇಕೆಂಬ ಷರತ್ತು ವಿಧಿ ಸಲಾಗಿದೆ. ಇದು ಕಬ್ಬು ಬೆಳೆಗಾರರಿಗೆ ಮಾರಕವಾಗಿದ್ದು, ಬೇರೆ ಕಡೆ ಕಬ್ಬನ್ನು ಮಾರದಂತೆ ಕಬ್ಬು ಬೆಳೆಗಾರರನ್ನು ಕಟ್ಟಿ ಹಾಕಲು ಕಾರ್ಖಾನೆಯವರು ಈ ತಂತ್ರ ಮಾಡುತ್ತಿದ್ದಾರೆಂದು ಕಬ್ಬು ಬೆಳೆಗಾರರು ದೂರಿದ್ದಾರೆ.

Advertisement

 ಗುತ್ತಿಗೆದಾರರಿಂದ ಆಮಿಷ: ಕಾರ್ಖಾನೆಯ ಗುತ್ತಿಗೆದಾರರು ಮಾಡಿಕೊಳ್ಳುತ್ತಿರುವ ಒಪ್ಪಂದದಲ್ಲಿನ ಕೆಲ ನಿಬಂಧನೆಗಳು ಕಬ್ಬು ಬೆಳೆಗಾರರನ್ನು ಆಮಿಷಕ್ಕೊಳಗಾಗುವಂತೆ ಮಾಡಿವೆ. ಒಪ್ಪಂದ ಪತ್ರದಲ್ಲಿರುವಂತೆ ಕಾಯ್ದಿರಿಸಿದ ಕಬ್ಬಿನ ಕ್ಷೇತ್ರಕ್ಕೆ ಪ್ರತಿ ಎಕರೆಗೆ 20 ಸಾವಿರ ರೂ.ನಂತೆ ಮುಂಗಡ ಸಾಲವೆಂದು ಡಿಸೆಂಬರ್‌-ಜನವರಿ ತಿಂಗಳಲ್ಲಿ ಬ್ಯಾಂಕ್‌ ಮೂಲಕ ನೀಡಲಾಗುವುದು ಎಂಬ ಆಮಿಷ ಒಡ್ಡುವ ಮೂಲಕ ಕಬ್ಬು ಬೆಳೆಗಾರರನ್ನು ಕಾರ್ಖಾನೆಯತ್ತ ಸೆಳೆಯುವ ತಂತ್ರಕ್ಕೆ ಗುತ್ತಿಗೆದಾರರು ಮುಂದಾಗಿದ್ದಾರೆ.

ಮುಂಗಡ ಸಾಲ ನೀಡಲಾಗುತ್ತದೆ ಎಂಬ ಕಾರಣದಿಂದ ಅನೇಕ ಕಬ್ಬು ಬೆಳೆಗಾರರು ಒಪ್ಪಂದ ಪತ್ರಕ್ಕೆ ಮುಂದಾಗುತ್ತಿದ್ದಾರೆ. ಮುಂಗಡ ಹಣ ಸಿಗುತ್ತದೆ ಎಂಬ ಆಸೆಯಿಂದ ಒಪ್ಪಂದ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಬೇರೆ ಕಾರ್ಖಾನೆಗಳಲ್ಲಿ ಹೆಚ್ಚಿನ ದರ ಇದ್ದರೂ ಅಲ್ಲಿಗೆ ಕಬ್ಬು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗದ ಸ್ಥಿತಿ ಎದುರಾಗಬಹುದು. ಅಲ್ಲದೇ ಈ ಒಪ್ಪಂದ ಮುರಿದುಕೊಂಡು ಒಂದು ವೇಳೆ ರೈತ ಬೇರೆಡೆ ಕಬ್ಬು ಮಾರಾಟ ಮಾಡಿದ್ದೇ ಆದರೆ ಪ್ರತಿ ಎಕರೆಗೆ 5 ಸಾವಿರ ರೂ.ನಂತೆ ದಂಡ ವಿಧಿ ಸುವ ಹಕ್ಕು ಕಾರ್ಖಾನೆ ಹೊಂದಿರುತ್ತದೆ ಎಂದು ಒಪ್ಪಂದ ಪತ್ರದಲ್ಲಿನ ಷರತ್ತುಗಳಲ್ಲಿ ಕಾಣಿಸಲಾಗಿದೆ.

 

-ಸಂಗೂರು ಕಾರ್ಖಾನೆಯ ಗುತ್ತಿಗೆದಾರು ಅನ ಧಿಕೃತವಾಗಿ ಕಬ್ಬು ಬೆಳೆಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕಬ್ಬು ಬೆಳೆಗಾರರನ್ನು ಹಿಡಿದಿಟ್ಟುಕೊಳ್ಳುವ ತಂತ್ರಕ್ಕೆ ಮುಂದಾಗಿದ್ದಾರೆ. ಈ ಮೂಲಕ ಕಾರ್ಖಾನೆಯ ಗುತ್ತಿಗೆದಾರರು ಕಬ್ಬು ಬೆಳೆಗಾರರ ಮೇಲೆ ಪ್ರಹಾರ ನಡೆಸುತ್ತಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು.

ಶಿವಾನಂದ ಗುರುಮಠ, ರಾಜ್ಯಾಧ್ಯಕ್ಷರು, ಕಬ್ಬು ಬೆಳೆಗಾರರ ಸಂಘ

ವೀರೇಶ ಮಡ್ಲಾರ

Advertisement

Udayavani is now on Telegram. Click here to join our channel and stay updated with the latest news.

Next