Advertisement

ಅನಾಥ ಮಕ್ಕಳ ಆರೈಕೆಗೆ ಮುಂದಾಗಿ

12:09 AM Jun 04, 2021 | Team Udayavani |

ಹೊಸದಿಲ್ಲಿ: ಕೋವಿಡ್ ನಿಂದಾಗಿ ತಮ್ಮ ಹೆತ್ತವರನ್ನು ಅಥವಾ ಪೋಷಕರನ್ನು ಕಳೆದು ಕೊಂಡು ಅನಾಥರಾಗಿರುವ ಮಕ್ಕಳ ಆಶ್ರಯ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಕುರಿತಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸರಕಾರ ಗಳಿಗೆ ಪತ್ರ ಬರೆದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೊರೊನಾದಿಂದ ಅನಾಥ ಮಕ್ಕಳನ್ನು ಪತ್ತೆ ಮಾಡುವುದು, ಅವರಿಗೆ ಆಶ್ರಯ ಕಲ್ಪಿಸುವುದು ಸೇರಿದಂತೆ ಅವರ ಮೇಲೆ ಯಾವುದೇ ಅನ್ಯಾಯ- ಅಕ್ರಮ ಗಳು ನಡೆಯದಂತೆ ಎಚ್ಚರಿಕೆ ವಹಿಸುವ ಕುರಿತಾಗಿ ಕೆಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

Advertisement

ಇತ್ತೀಚೆಗೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣ ಆಯೋಗ (ಎನ್‌ಸಿಪಿಸಿಆರ್‌), ಸುಪ್ರೀಂ ಕೋರ್ಟ್‌ಗೆ ವರದಿಯೊಂದನ್ನು ಸಲ್ಲಿಸಿ, ದೇಶದಲ್ಲಿ ಕೊರೊನಾದಿಂದಾಗಿ 9,346 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದು ಕೊಂಡಿ ದ್ದಾರೆ. ಅವರಲ್ಲಿ 1,700 ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದಾ ರೆಂದು ಹೇಳಿತ್ತು. ಹೀಗಾಗಿ ಮಾರ್ಗ ಸೂಚಿಗಳು ಜಾರಿಗೊಂಡಿವೆ.

ಸಂಖ್ಯೆ ಮತ್ತಷ್ಟು ಇಳಿಕೆ: ದೇಶದಲ್ಲಿ ಸೋಂಕಿನ ಪ್ರಭಾವ ಇಳಿಮುಖವಾಗುತ್ತಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ 1,34,154 ಹೊಸ ಸೋಂಕಿನ ಪ್ರಕರಣ ಮತ್ತು 2,887 ಮಂದಿ ಅಸುನೀಗಿದ್ದಾರೆ. 2,11,499 ಮಂದಿ ಚೇತರಿಕೆ ಕಂಡಿದ್ದಾರೆ. ಇದರಿಂದಾಗಿ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.6.21ಕ್ಕೆ ಇಳಿದಿದೆ. ಸಕ್ರಿಯ ಸೋಂಕು ಸಂಖ್ಯೆ ಕೂಡ 17,13,413ಕ್ಕೆ ಇಳಿದಿದೆ. ಚೇತರಿಕೆ ಪ್ರಮಾಣ ಶೇ.92.79ಕ್ಕೆ ಏರಿಕೆಯಾಗಿದೆ.

ನಿರಂತರ ಸೋಂಕು ನಿಗ್ರಹ ಪ್ರತಿಕಾಯ :

ಹೊಸದಿಲ್ಲಿ: ಲಘು ಪ್ರಮಾಣದ ಕೋವಿಡ್ ಸಂಕಷ್ಟವನ್ನು ಗೆದ್ದು ಬಂದವರಿಗೆ ಸಂತಸದ ಸುದ್ದಿಯೊಂದಿದೆ. ಅಂಥವರ ದೇಹದ ಮೂಳೆಗಳಲ್ಲಿರುವ ಅಸ್ಥಿಮಜ್ಜೆಯಲ್ಲಿರುವ ಜೀವಕಣಗಳು (ಬೋನ್‌ಮ್ಯಾರೋ ಸೆಲ್ಸ್‌) ಕೊರೊನಾ ಸೋಂಕನ್ನು ಎದುರಿಸುವ ರೀತಿ ತಿಳಿದಿರುತ್ತದಾದ್ದರಿಂದ ಅದು ಈಗ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ವಿರೋಧಿ ಪ್ರತಿ ಕಾಯಗಳನ್ನು ಸೃಷ್ಟಿಸುವಲ್ಲಿ ನಿರತವಾಗಿರುತ್ತದೆ. ಇದರಿಂದ, ಅಸ್ಥಿಮಜ್ಜೆಯು ಕೊಂಚ ತೆಳು ವಾಗುತ್ತದಾದರೂ ದೇಹವನ್ನು ಕೊರೊನಾ ವಿರುದ್ಧ ಹೋರಾಡುವಲ್ಲಿ ದೃಢವಾಗಿಸುವತ್ತ ಅದು ಕೆಲಸ ಮಾಡುತ್ತಿರುತ್ತದೆ. ದಶಕಗಳವರೆಗೆ ಹಾಗೂ ಕೆಲವೊಮ್ಮೆ ಜೀವಮಾನ ಪೂರ್ತಿ ಈ “ಕೋವಿಡ್ ನಿರೋಧಕತೆ’ ಉಂಟಾಗಬಹುದು ಎಂದು ‘Nature.com’ ಎಂಬ ಜಾಲ ತಾಣದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ಹೇಳಿದೆ.

Advertisement

ಆದರೆ ಇಲ್ಲೊಂದು ಸಣ್ಣ ಅಪಾಯವೂ ಇದೆ ಎನ್ನುತ್ತಾರೆ ಸಂಶೋಧಕರು. ಈಗಾಗಲೇ ದೇಹವನ್ನು ಪ್ರವೇಶಿಸಿದ್ದ ಕೋವಿಡ್ ವೈರಾಣುಗಳ ಮಾದರಿಗೆ ಅನುಗುಣವಾಗಿ ಅಸ್ಥಿಮಜ್ಜೆಯು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಆದರೆ ಕೊರೊನಾದ ರೂಪಾಂತರಿ ಹೊಸ ವೈರಾಣುಗಳು ದೇಹ ಪ್ರವೇಶಿಸಿದರೆ ಈಗಾಗಲೇ ಉತ್ಪಾದನೆಯಾಗಿರುವ ಪ್ರತಿಕಾಯಗಳು ಹೊಸ ರೂಪಾಂತರಿಯನ್ನು ತಡೆಯುವಲ್ಲಿ ವಿಫ‌ಲ ವಾಗುತ್ತವೆ ಎಂದು ಹೇಳಲಾಗಿದೆ.

ಮಾರ್ಗಸೂಚಿಯಲ್ಲೇನಿದೆ? :

ರಾಜ್ಯ ಸರಕಾರಗಳು ಜಿಲ್ಲೆಗಳಲ್ಲಿರುವ ಸೋಂಕಿನಿಂದ ಅನಾಥರಾದ ಮಕ್ಕಳನ್ನು ಪತ್ತೆ ಹಚ್ಚಬೇಕು.  ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವುದು ಅಥವಾ ಸಮೀಕ್ಷೆ ಮಾದರಿಗಳನ್ನು ಅನುಸರಿಸಬಹುದು.

ಇಂಥ ಮಕ್ಕಳ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ಹೆಲ್ಪ್ಲೈನ್‌ ಸಂಖ್ಯೆಗಳನ್ನು ಶುರು ಮಾಡಬೇಕು.

ಅಅನಾಥ ಮಕ್ಕಳ ಹೆಸರು, ಅವರಿರುವ ಪರಿಸ್ಥಿತಿ, ನೆರವು, ಬೇಡಿಕೆಗಳ ಡೇಟಾ ಬೇಸ್‌ ಸಿದ್ಧಗೊಳಿಸಿ ಟ್ರಾಕ್‌ ಚೈಲ್ಡ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಹೆತ್ತವರಿಬ್ಬರು ಸೋಂಕಿತರಾಗಿದ್ದರೆ ಅಂಥವರ ಮಕ್ಕಳಿಗೂ ನೆರವು ನೀಡಬೇಕು. ಅವರನ್ನು ತಾತ್ಕಾಲಿಕ ಆರೈಕೆ ಕೇಂದ್ರಗಳಿಗೆ ರವಾನಿಸಬೇಕು. ರಕ್ಷಣ ವ್ಯವಸ್ಥೆ ಪಾಲಿಸಬೇಕು.

ಕೇಂದ್ರದಲ್ಲಿನ  ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಅಲ್ಲಿಯೇ ಐಸೊಲೇಶನ್‌ ಕೇಂದ್ರದಲ್ಲಿ ಆರೈಕೆ ಮಾಡಬೇಕು. ಅಗತ್ಯವಿದ್ದರೆ ಮಕ್ಕಳ ಮನೋತಜ್ಞರನ್ನು ಕರೆ ತಂದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸಬೇಕು.

ಕೇಂದ್ರಗಳಲ್ಲಿ ಅಹಿತಕರ ಘಟನೆಗಳನ್ನು ತಪ್ಪಿಸಲು ಬಳಿ ಪೊಲೀಸರ ಗಸ್ತು ಇರಬೇಕು.

ಸೋಂಕಿತರು ಆಸ್ಪತ್ರೆಗೆ ದಾಖಲಾದಾಗ ಹತ್ತಿರದ ಹಾಗೂ ನಂಬಿಕೆಯ ಸಂಬಂಧಿಕರ ಮೊಬೈಲ್‌ ನಂಬರ್‌ ಪಡೆಯಬೇಕು.

ಸೋಂಕಿತರು ಮೃತರಾದರೆ, ಸಂಬಂಧಿಕರಿಂದ ಮಕ್ಕಳ ಬಗ್ಗೆ ಮಾಹಿತಿ ಪಡೆದು, ದತ್ತು ಪಡೆಯಲು ಕ್ರಮ.

ಮಕ್ಕಳಿಗೆ ಹೆತ್ತವರಿಂದ ಸಿಗಬೇಕಾದ ಹಣ, ಆಸ್ತಿ, ವಂಚಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದು.

ಮಕ್ಕಳ ಕಳ್ಳಸಾಗಣೆ ಸೇರಿದಂತೆ ಅನ್ಯಾಯ ಗಳನ್ನು ತಡೆಯಲು ಪ್ರತ್ಯೇಕ ಪೊಲೀಸ್‌ ಪಡೆ.

ಜಾಲತಾಣಗಳಲ್ಲಿ ಅನಾಥರಾದ ಮಕ್ಕಳ ದತ್ತು ತೆಗೆದುಕೊಳ್ಳುವ ಬಗೆಗಿನ ಜಾಹೀರಾತಿಗೆ ನಿಷೇಧ ಮತ್ತು ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮಕ್ಕಳಿಗೆ ಯೋಜನೆಗಳು ಲಭ್ಯವಾಗಿದೆಯೇ ಎಂಬುದನ್ನು ಮನಗಾಣಲು ಆಗಾಗ ತಪಾಸಣೆ

Advertisement

Udayavani is now on Telegram. Click here to join our channel and stay updated with the latest news.

Next