“ನೋಡಿ, ಅವರವರ ಹಣೆ ಬರಹದಲ್ಲಿ ಭಗವಂತ ಯಾರ ಜೊತೆ ಮದುವೆ ಅಂತ ನಿಶ್ಚಯಿಸಿದ್ದಾನೋ, ಯಾರಿಗ್ಗೊತ್ತು? ಸುಮ್ಮನೆ ಮಾವನ ಮಕ್ಕಳ ಜೊತೆ ಹೆಸರಿಟ್ಟು , ನನ್ನ ಮಕ್ಕಳಿಗೆ ಸಂಬಂಧ ಕಟ್ಟಬೇಡಿ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಏನೇನೋ ಹೇಳಿ, ಅವರ ಮನಸ್ಸು ಕಡಡುವುದು ಬೇಡ. ಮಕ್ಕಳು ಮಕ್ಕಳಾಗಿಯೇ ಆಟವಾಡಿಕೊಂಡಿರಲಿ’ ಎಂದು ನಮ್ಮಮ್ಮ, ನಾವು ಚಿಕ್ಕವರಿದ್ದಾಗ ಯಾರಾದರೂ ನಮ್ಮ ಮದುವೆ ಬಗ್ಗೆ ತಮಾಷೆ ಮಾಡುತ್ತಿದ್ದರೆ ಮುಲಾಜಿಲ್ಲದೆ ಹೇಳುತ್ತಿದ್ದಳು.
“ನನ್ನ ಮಗನನ್ನ ಮದುವೆ ಆಗ್ತಿಯೇನೆ?’, “ನೋಡೋ, ಇವಳೇ ನಿನ್ನ ಹೆಂಡ್ತಿ’ ಅಂತೆಲ್ಲ ಮಕ್ಕಳೆದುರು ತಮಾಷೆ ಮಾಡುವುದು ಅಮ್ಮನಿಗೆ ಹಿಡಿಸುತ್ತಿರಲಿಲ್ಲ. ಆಗ ಅದರರ್ಥ ಸರಿಯಾಗಿ ಆಗದಿದ್ದರೂ, ಈಗ, ಅಮ್ಮ ಯಾಕೆ ಹಾಗೆ ಹೇಳುತ್ತಿದ್ದಳೆಂದು ಅರ್ಥವಾಗುತ್ತಿದೆ.
ಇತ್ತೀಚೆಗೆ ದೊಡ್ಡ ಹೊಟೇಲೊಂದಕ್ಕೆ ಹೋಗಿದ್ದೆವು. ನಮ್ಮ ಪಕ್ಕದ ಟೇಬಲ್‌ನಲ್ಲಿ ಒಂದು ದೊಡ್ಡ ಗುಂಪು ಮೊದಲೇ ಆಸೀನವಾಗಿತ್ತು. ಕನಿಷ್ಠ ಐದಾರು ಫ್ಯಾಮಿಲಿಗಳಿದ್ದಿರಬಹುದು. ಮಕ್ಕಳೆಲ್ಲ ಗದ್ದಲ ಮಾಡುತ್ತಿದ್ದರು. ಅದರಲ್ಲೊಂದು ಚಿಕ್ಕ ಹುಡುಗಿ, ಎಂಟತ್ತು ವರ್ಷದವಳಿರಬಹುದು, ತುಂಬಾ ಮುದ್ದಾಗಿದ್ದಳು. ಎಲ್ಲರೂ ಅವಳನ್ನು ಮುದ್ದು ಮುದ್ದಾಗಿ ಮಾತನಾಡಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರಲ್ಲೊಬ್ಬರು ತಮ್ಮ ಆರು ಅಥವಾ ಏಳನೇ ತರಗತಿ ಓದುತ್ತಿದ್ದ ಮಗನಿಗೆ ಎದ್ದು ನಿಲ್ಲಲು ಹೇಳಿ, ಪಕ್ಕಕ್ಕೆ ಈ ಮುದ್ದು ಹುಡುಗಿಯನ್ನು ನಿಲ್ಲಿಸಿ, “ನೋಡ್ರೀ, ಈ ಜೋಡಿ ಹೇಗಿದೆ ಹೇಳಿ? ಯಾರು ಏನಾದರೂ ಅನ್ನಲಿ, ನಾವಿಬ್ಬರೂ ಗೆಳೆಯರ ಜಾತಿ ಬೇರೆಯೇ ಆದರೂ, ಈಕೇನೇ ಮುಂದೆ ನನ್ನ ಸೊಸೆಯಾಗುವವಳು. ಏನು ಹೇಳ್ತೀಯಾ?’ ಎಂದು ಆ ಹುಡುಗಿಯ ತಂದೆಯನ್ನು ಕೇಳಿದಾಗ, ಅವರು ಸ್ವಲ್ಪ ಗಲಿಬಿಲಿಗೊಂಡು ಪೆಚ್ಚುಮೋರೆಯಲ್ಲಿ ನಕ್ಕರು. ಆ ಪುಟ್ಟ ಹುಡುಗ ನಾಚಿಕೆಯಿಂದ ತಲೆತಗ್ಗಿಸಿದ್ದ. ಆ ಮುದ್ದು ಹುಡುಗಿಯ ಮೊಗದಲ್ಲಿ ಏನೂ ಅರ್ಥವಾಗದ ಮುಗ್ಧ ಮಂದಹಾಸ.
ಮಗಳನ್ನು ಸರ್ಕಾರಿ ಕೆಲಸದಲ್ಲಿದ್ದ ತನ್ನ ತಮ್ಮನಿಗೇ ಕೊಟ್ಟು ಮದುವೆ ಮಾಡಬೇಕೆಂದು ಆಕೆಯ ಹಠ. ಆದರೆ, ಆ ಹುಡುಗನಿಗೆ ಈ ಮದುವೆಯಲ್ಲಿ ಆಸಕ್ತಿ ಇರಲಿಲ್ಲ. ನಾನೇ ಎತ್ತಿ ಆಡಿ ಬೆಳೆಸಿದ ಹುಡುಗಿ, ಇವಳೊಂದಿಗೆ ಮದುವೆ ಬೇಡ ಎಂಬ ತಮ್ಮನ ಮಾತನ್ನು ಕಡೆಗಣಿಸಿ, ಜಿದ್ದಿಗೆ ಬಿದ್ದು ಮದುವೆ ಮಾಡಿದಳು. ಆತ ಸಂಸಾರ ಮಾಡಲಾರೆ ಎಂದು ಸಿಟ್ಟಾಗಿ, ಬೇರೆ ಊರಿಗೆ ಟ್ರಾನ್ಸ್‌ಫರ್ ತೆಗೆದುಕೊಂಡು ಹೋದಾಗ, ಆತನ ಆಫೀಸಿಗೇ ಹೋಗಿ, ಮೇಲಧಿಕಾರಿಗಳನ್ನು ಸಂಪರ್ಕಿಸಿ, ತನ್ನ ಮಗಳಿಗಾದ ಅನ್ಯಾಯವನ್ನು ಎಲ್ಲರೆದುರಿಗೆ ಹೇಳಿ ಗೋಳಾಡಿದಳು. ಎಲ್ಲರೂ ಬುದ್ಧಿ ಹೇಳಿ ಕೊನೆಗೂ ಆ ಜೋಡಿ ಒಂದಾಗುವಂತೆ ಮಾಡಿದರು. ಈಗ ಮುದ್ದಾದ ಇಬ್ಬರು ಮಕ್ಕಳು ಅವರಿಗೆ. ಜೀವನವೂ ಚೆನ್ನಾಗಿದೆ. ಆದರೆ, ಮತ್ತೂಂದು ಇಂಥದ್ದೇ ಪ್ರಕರಣದಲ್ಲಿ ಸಿಟ್ಟಿಗೆದ್ದ ಹುಡುಗ, ಬೇರೆ ಹೆಂಗಸರ ಸಹವಾಸ ಮಾಡಿ, ಮಾರಣಾಂತಿಕ ಕಾಯಿಲೆಗೆ ತಾನೂ ಬಳಿಯಾಗಿ, ಕುಟುಂಬವನ್ನೂ ಅದರ ಸುಳಿಗೆ ಸಿಲುಕಿಸಿಬಿಟ್ಟ. ಸೋದರಮಾವನೊಡನೆ ಬಾಳಲು ಸಾಧ್ಯವಿಲ್ಲದೆಂದು ಸಾರಾಸಗಟಾಗಿ ನಿರಾಕರಿಸಿ, ಹುಡುಗಿಯೇ ಮನೆಬಿಟ್ಟು ಆಶ್ರಮ ಸೇರಿಕೊಂಡ ಘಟನೆ ನನ್ನ ಕಣ್ಣೆದುರೇ ನಡೆದಿದೆ.
ಮದುವೆ ಆಟ ಎಷ್ಟು ಸರಿ?
ತೊಟ್ಟಿಲಿನಲ್ಲಿ ಹಾಕಿದ ದಿನದಿಂದಲೇ ಸೋದರ ಸಂಬಂಧದೊಂದಿಗೋ, ಸೋದರ ಮಾವನೊಂದಿಗೋ ಜೋಡಿ ಮಾಡುವವರು ಕೆಲವರಾದರೆ, ಇನ್ನೂ ಕೆಲವರು, ಆತ್ಮೀಯ ಸ್ನೇಹಿತರ ಮಗ/ಮಗಳನ್ನು ತೋರಿಸಿ ನಿನ್ನ ಗಂಡನೆಂದೋ, ಹೆಂಡತಿಯೆಂದೋ ಮಕ್ಕಳಿಗೆ ಕೀಟಲೆ ಮಾಡುತ್ತಾರೆ. ಅದು ತಮಾಷೆಯೇ ಆದರೂ, ಕೆಲವು ಮಕ್ಕಳು ಮನಸ್ಸಿನಲ್ಲಿಯೇ ಆಸೆ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಮುಂದೆ, ಇಬ್ಬರೂ ಪರಸ್ಪರ ಇಷ್ಟಪಟ್ಟರೆ ಚಿಂತೆಯಿಲ್ಲ. ಏಕಮುಖ ಪ್ರೀತಿಯಾದರೆ ಮುಗಿಯಿತು ಕಥೆ. ಇದೇ ವಿಷಯ ಮುಂದೆ ಎರಡು ಕುಟುಂಬಗಳ ನಡುವೆ ದ್ವೇಷಕ್ಕೆ ತಿರುಗಿ ಅನರ್ಥವಾಗಿರುವುದೂ ಉಂಟು, ಮಕ್ಕಳು ಖನ್ನತೆಗೆ ಜಾರಿ, ಬಾಳನ್ನು ಗೋಳು ಮಾಡಿಕೊಂಡಿರುವುದೂ ಇದೆ.
ಹೀಗೆ ದೊಡ್ಡವರೇ ನಿಶ್ಚಯಿಸಿದ ಮದುವೆಗೆ ಮಕ್ಕಳು ಒಪ್ಪಿಕೊಳ್ಳದಿದ್ದರೆ, ಉಪವಾಸ ಮಾಡಿಯೋ, ಸಾಯುತ್ತೇನೆಂದು ಹೆದರಿಸಿಯೋ, ಇದೇ ನನ್ನ ಕೊನೆಯಾಸೆ ಎಂದು ಬ್ಲ್ಯಾಕ್‌ಮೇಲ್ ಮಾಡಿಯೋ ಮದುವೆಗೆ ಒಪ್ಪಿಸುವುದು ಹಿರಿಯರಿಗೆ ಗೊತ್ತಿದೆ. ಅವರ ಆಲೋಚನೆಯ ಉದ್ದೇಶ ಒಳ್ಳೆಯದೇ ಇದ್ದರೂ, ಮುಂದೆ ಬಾಳಿ ಬದುಕಬೇಕಾದವರು ಮಕ್ಕಳೇ ತಾನೆ? ಆಟವಾಡಿಕೊಂಡಿರುವ ಮಕ್ಕಳ ಮನಸ್ಸಿನಲ್ಲಿ ಗಂಡ-ಹೆಂಡತಿ, ಮದುವೆ, ಸಂಸಾರ ಅಂತೆಲ್ಲಾ ಕಲ್ಪನೆ ಮೂಡಿಸುವ ಮುನ್ನ ಎಚ್ಚರ ವಹಿಸಬೇಕಲ್ಲವೆ?
ನಳಿನಿ ಟಿ. ಭೀಮಪ್ಪ