Advertisement

ಸರ್ಕಾರಿ ವೈದ್ಯರಿಂದ ಕ್ಷಯರೋಗಿಗಳ ದತ್ತು

02:40 PM Oct 22, 2022 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಮೊದಲಿನಿಂದಲೂ ವಿನೂತನ ಕಾರ್ಯಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕ್ಷಯರೋಗಿಗಳ ದತ್ತು ಪಡೆದು ಆರೈಕೆ ಮಾಡುವುದು ಒಂದಾಗಿದೆ. ಜಿಲ್ಲೆಯಲ್ಲಿ ಕ್ಷಯವನ್ನು ನಿರ್ಮೂಲನೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 473 ಸಕ್ರಿಯ ಕ್ಷಯ ಪ್ರಕರಣಗಳಿವೆ.

Advertisement

2025ಕ್ಕೆ ಕ್ಷಯಮುಕ್ತ ಭಾರತ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಆರೋಗ್ಯ ಇಲಾಖೆ, ಕ್ಷಯ ನಿಯಂತ್ರಣ ಅಧಿಕಾರಿಗಳು ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಜತೆಯಾಗಿ ಕ್ಷಯದ ಲಕ್ಷಣದ ಕುರಿತು ಅರಿವು ಹಾಗೂ ಕ್ಷಯರೋಗಿಗಳಿಗೆ ನೆರವಾದರೆ ಕ್ಷಯ ನಿರ್ಮೂಲನೆಗೆ ಸಹಾಯಕ ಆಗುತ್ತದೆ.

ಗ್ರಾಪಂನಿಂದ ಪೌಷ್ಟಿಕ ಆಹಾರ ಕಿಟ್‌: ಕ್ಷಯವನ್ನು ಗ್ರಾಮ ಮಟ್ಟದಲ್ಲಿ ಕ್ಷಯ ನಿರ್ಮೂಲನೆ ಮಾಡಲು ಹಾಗೂ ಗ್ರಾಮಮಟ್ಟದ ಕ್ಷಯ ರೋಗಿಗಳ ಆರೈಕೆಗಾಗಿ ಜಿಲ್ಲೆಯ 4 ತಾಲೂಕುಗಳಾದ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ,ದೇವನಹಳ್ಳಿ ತಾಲೂಕಿನ ಗ್ರಾಪಂ ಗಳಿಗೆ ಜಿಪಂ ಸಿಇಒ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಕ್ಷಯ ರೋಗಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರದ ಕಿಟ್‌ ನೀಡಲು ಸೂಚನೆ ನೀಡಲಾ ಗಿದೆ. ಈ ಮೂಲಕ ಗ್ರಾಮಮಟ್ಟದ ರೋಗಿಗಳಿಗೆ ನೆರವಾಗಲಿದೆ.

61 ಮಂದಿ ನೋಂದಣಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್‌. ಲತಾ 10 ಮಂದಿ ಕ್ಷಯರೋಗಿಗಳ ದತ್ತು ಪಡೆಯಲು ಮುಂದಾಗಿದ್ದಾರೆ.  ಈ ಮೂಲಕ ದತ್ತು ಪಡೆಯಲು ಇತರರಿಗೆ ಮಾದರಿಯಾಗಿದ್ದಾರೆ. ಈಗಾಗಲೇ ಜಿಲ್ಲೆಯ ಅನೇಕರು ಕ್ಷಯರೋಗಿಗಳ ದತ್ತು ಪಡೆದು ಆರೈಕೆ ಮಾಡುತ್ತಿದ್ದಾರೆ. ಇದಲ್ಲದೆ ಇದೀಗ ಜಿಲ್ಲಾದ್ಯಂತ 61 ಮಂದಿ ದಾನಿಗಳು ದತ್ತು ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಕ್ಷಯ ರೋಗಿಗಳಿಗೆ ಅಗತ್ಯ ನೆರವು ದೊರೆಯಲಿದೆ.

ದತ್ತು ಸ್ವೀಕಾರ ಕಾರ್ಯಕ್ರಮ: ಕ್ಷಯರೋಗಿಗಳಿಗೆ ಅಗತ್ಯ ಇರುವ ಪೋಷಕಾಂಶಯುಕ್ತ ಆಹಾರ ಹಾಗೂ ಆರೈಕೆ ಮಾಡಲು ದತ್ತು ಸ್ವೀಕಾರ ಕಾರ್ಯಕ್ರಮವನ್ನು ಆರಂಭಿಸಿತ್ತು. ಈ ಮೂಲಕ ಕ್ಷಯ ನಿರ್ಮೂಲನೆಯ ಮಾಡಲು ಮುಂದಾಗಿತ್ತು. ಇದೀಗ ಜಿಲ್ಲೆಯ ಸರ್ಕಾರಿ ವೈದ್ಯರು, ಅಧಿಕಾರಿಗಳು, ಸಂಘ-ಸಂಸ್ಥೆ ಸೇರಿದಂತೆ ಅನೇಕರು ದತ್ತು ಪಡೆಯಲು ಮುಂದಾಗಿದ್ದು, ದತ್ತು ಪಡೆಯಲು ಜಿಲ್ಲೆಯ 61 ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ 2025ಕ್ಕೆ ಕ್ಷಯ ಮುಕ್ತ ಭಾರತ ಕನಸನ್ನು ಪೂರ್ಣಗೊಳಿಸಲು ಜಿಲ್ಲೆಯ 4 ತಾಲೂಕುಗಳಲ್ಲೂ ಪ್ರಯತ್ನ ನಡೆಯುತ್ತಿದೆ.

Advertisement

ವೈದ್ಯರಿಂದ ದತ್ತು: ಕ್ಷಯರೋಗಿಗಳ ಆರೈಕೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಸಜ್ಜಾಗಿದೆ. ಇದಕ್ಕಾಗಿ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ವೈದ್ಯರು ಕನಿಷ್ಠ ಒಬ್ಬ ಕ್ಷಯರೋಗಿಯನ್ನು ದತ್ತು ಪಡೆದು ಪೌಷ್ಟಿಕ ಆಹಾರ ಹಾಗೂ ಚಿಕಿತ್ಸೆ ನೀಡಲು ಮುಂದಾಗಿದೆ. ಈ ಮೂಲಕ ಉತ್ತಮ ಕೆಲಸಕ್ಕೆ ಇಲಾಖೆ ಮುಂದಾಗಿದೆ.

ವಿವಿಧೆಡೆ ಕ್ಷಯ ಪರೀಕ್ಷೆಗೆ ಒತ್ತು: ಕ್ಷಯರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಜತೆಗೆ ಕ್ಷಯ ನಿಯಂತ್ರಣಕ್ಕೆ ಅರಿವು ಕಾರ್ಯಕ್ರಮ, ಟೆಸ್ಟಿಂಗ್‌ಗೆ ಒತ್ತು ನೀಡಲಾಗಿದೆ. ಜಿಲ್ಲೆಯ ಕೈಗಾರಿಕೆಗಳಲ್ಲಿ, ಅಂಗನವಾಡಿ, ಶಾಲೆಗಳಲ್ಲಿ ಕ್ಷಯ ಪರೀಕ್ಷೆ ಮಾಡಲಾಗುತ್ತಿದೆ. ಇದರ ಜತೆಗೆ ಕ್ಷಯದ ಲಕ್ಷಣಗಳು, ಅದರ ಅಪಾಯದ ಬಗ್ಗೆ ಅರಿವನ್ನು ಜನರಲ್ಲಿ ಮೂಡಿಸಲಾಗುತ್ತಿದೆ.

ಮನೆ ಬಾಗಿಲಿಗೆ ಔಷಧ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಕ್ಷಯರೋಗಿಗಳಿಗೆ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್‌, ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಅಗತ್ಯ ಔಷಧ ಲಭ್ಯವಿದೆ. ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ರೋಗಿಗಳಿಗೆ ಆಶಾ ಕಾರ್ಯತೆಯರು, ಸ್ವಯಂ ಸೇವೆ ಮಾಡಲು ಮುಂದಾಗುವವರ ಮೂಲಕ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗಿಗಳ ದತ್ತು ಪಡೆಯಲು 61 ಮಂದಿ ಈಗಾಗಲೇ ನೋಂದಾಯಿಸಿ ಕೊಂಡಿದ್ದಾರೆ. ಸರ್ಕಾರಿ ವೈದ್ಯರು ಕೂಡ ಕನಿಷ್ಠ ತಲಾ ಒಂದು ರೋಗಿ ದತ್ತು ಪಡೆಯಲು ಮುಂದಾಗಿದ್ದು, ಸಂಘ- ಸಂಸ್ಥೆಗಳು ಸಾರ್ವಜನಿಕ ನೆರವಿನಿಂದ ರೋಗಿಗಳ ಆರೈಕೆಗೆ ಸಹಾಯ ಆಗಲಿದೆ. – ಡಾ. ನಾಗೇಶ್‌, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next