ಬೆಂಗಳೂರು: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕ್ಷಯ ರೋಗ (ಟಿಬಿ) ಮುಕ್ತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರ ಒದಗಿ ಸಲು ನೋಂದಣಿಗೊಂಡ ನಿ-ಕ್ಷಯ ಮಿತ್ರರಲ್ಲಿ ಸಹಾಯ ಕೋರಿದ ಶೇ.100ರಷ್ಟು ಟಿಬಿ ರೋಗಿಗಳನ್ನು ದಾನಿಗಳು ದತ್ತುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯು 2022ರ ಸೆ.9ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಟಿಬಿ ಮುಕ್ತ ಭಾರತ ಅಭಿಯಾನವನ್ನು ಜಾರಿಗೆ ತಂದಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ವನ್ನು ಸಹ ಪಡೆದುಕೊಂಡಿದೆ. ಅದರ ಅನ್ವಯ ಕ್ಷಯ ರೋಗಿಗಳನ್ನು ಒಬ್ಬ ವ್ಯಕ್ತಿ, ಚುನಾಯಿತ ಪ್ರತಿ ನಿ ಧಿಗಳು ಅಥವಾ ಸಂಸ್ಥೆಗಳು ದತ್ತು ತೆಗೆದು ಕೊಂಡು ಆರೈಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 88,750 ಲಕ್ಷ ಮಂದಿ ಪೋರ್ಟಲ್ ನಿ-ಕ್ಷಯ ಮಿತ್ರರ ನೋಂದಣಿಯಾಗಿದ್ದಾರೆ. 14.39 ಲಕ್ಷ ಟಿಬಿ ರೋಗಿಗಳಿದ್ದು, 10,74,575 ನಿ-ಕ್ಷಯ ಮಿತ್ರರ ಸಹಾಯ ಕೋರಿದ್ದು, ಅವರಲ್ಲಿ 10,70,897 ಮಂದಿಗೆ ದಾನಿಗಳು ಪೌಷ್ಟಿಕ ಆಹಾರ ಒದಗಿಸುತ್ತಿದ್ದಾರೆ. ಇನ್ನೂ ಕರ್ನಾಟಕದಲ್ಲಿ 2,220 ಮಂದಿ ವೈಯಕ್ತಿಕವಾಗಿ, 203 ಸಂಸ್ಥೆಗಳು, 151 ಎನ್‌ಜಿಒ, ರಾಜಕೀಯ ಪಕ್ಷ 87, ಜನಪ್ರತಿನಿಧಿಗಳು 57, ಕಾರ್ಪೋರೆಟ್ 31, ಸಹಕಾರ ಸಂಘ 13 ಹಾಗೂ ಇತರೆ 341 ಮಂದಿ ಸೇರಿದಂತೆ 3101 ಮಂದಿ ದಾನಿಗಳು ನಿ-ಕ್ಷಯ ಮಿತ್ರದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಅರೋಗ್ಯ ಕಿಟ್‌ನಲ್ಲಿ ಏನಿದೆ?: ಸುಮಾರು 600 ರೂ. ಮೊತ್ತ ಕಿಟ್ ಟಿಬಿ ರೋಗಿಗೆ ದಾನಿಯೊಬ್ಬರು ನೀಡಬೇಕು. ಪ್ರಸ್ತುತ ಪಡಿತರದಲ್ಲಿ ಅಕ್ಕಿ ಉಚಿತವಾಗಿ ಲಭ್ಯವಾಗುತ್ತಿರುವುದರಿಂದ ಆರೋಗ್ಯ ಇಲಾಖೆಯು ಕಡಲೆ ಬೀಜ, ಬೆಲ್ಲ, ದ್ವಿದಳ ಧಾನ್ಯ, ಬೇಳೆ ಕಾಳಗಳನ್ನು ಪಟ್ಟಿಯಲ್ಲಿ ಸೇರಿಸಿದೆ. ದಾನಿಯು ಇಷ್ಟ ಪಟ್ಟ ಪ್ರದೇಶದಲ್ಲಿ ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳಬಹುದು. ಇಲ್ಲಿ ಹಣವನ್ನು ನೀಡುವಂತಿಲ್ಲ. ದಾನಿಗೆ ಒಂದು ವೇಳೆ ಕಿಟ್ ಕೋರಿಯರ್ ಮಾಡಲು ಸಾಧ್ಯವಾಗದೇ ಇದ್ದರೆ, ಆರೋಗ್ಯ ಇಲಾಖೆಗೆ ತಿಳಿಸಿದರೆ, ಅವರ ಸಿಬ್ಬಂದಿಯೇ ರೋಗಿಗಳ ಮನೆಗೆ ತಲುಪಿಸುತ್ತಾರೆ.
22 ಸಾವಿರ ರೋಗಿಗಳ ದತ್ತು: ರಾಜ್ಯದಲ್ಲಿ 0-14ವರ್ಷದೊಳಗಿನ 1,783 ಮಂದಿ ಹಾಗೂ 15 ವರ್ಷ ಮೇಲ್ಪಟ್ಟ 36,406 ರೋಗಿಗಳು ಸೇರಿದಂತೆ ಒಟ್ಟು 38,176 ಮಂದಿ ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 22,531 ಕ್ಷಯ ರೋಗಿಗಳು ಸಹಾಯ ಕೋರಿದ್ದಾರೆ. ಅವರನ್ನು ನಿ-ಕ್ಷಯ ಮಿತ್ರರ ಮೂಲಕ ದತ್ತು ನೀಡಿ, ಮಾಸಿಕ ಪೌಷ್ಟಿಕಾಂಶ ಭರಿತ ಆಹಾರ ಕಿಟ್ ವಿತರಿಸಲಾಗುತ್ತಿದೆ.
3 ವರ್ಷದವರೆಗೆ ದತ್ತು : ರಾಜ್ಯದಲ್ಲಿ ಕ್ಷಯ ರೋಗಿಗಳ ದತ್ತು ಪ್ರತಿಕ್ರಿಯೆಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.61.6 ದಾನಿಗಳು ಆರು ತಿಂಗಳ ಅವಧಿಗೆ, ಶೇ.36.3ರಷ್ಟು ದಾನಿಗಳು ಒಂದು ವರ್ಷ ಅವಧಿಗೆ, ಶೇ.1.7ರಷ್ಟು ದಾನಿಗಳು 2 ವರ್ಷದ ಅವಧಿಗೆ ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆಸ್ತಕರು ಆನ್ ಲೈನ್ https://communitysupport.nikshay.in ಮೂಲಕ ನೋಂದಾಯಿಸಿಕೊಳ್ಳ ಬಹುದು.
ಕ್ಷಯ ಮುಕ್ತ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಆಹಾರ ಕಿಟ್ ರೋಗಿಗಳ ಮನೆಗೆ ತಲುಪಿಸಲು ಪ್ರಸ್ತುತ ಬಿಗ್ ಬಾಸ್ಕೇಟ್, ಅಕ್ಷಯ ಪಾತ್ರೆ ಅವರ ಜತೆ ಮಾತುಕತೆ ನಡೆಸಲಾಗಿದೆ. ಜಿ.ಪಂ., ತಾಪಂನಲ್ಲಿ ಈ ಬಗ್ಗೆ ಅರಿವು ಮೂಡಿಸಿ, ರೋಗಿ ಗಳನ್ನು ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
-ಡಾ. ಅನಿಲ್ ಜಂಟಿ ನಿರ್ದೇಶಕ (ಕ್ಷಯ ರೋಗ)
-ತೃಪ್ತಿ ಕುಮ್ರಗೋಡು