Advertisement

ಸಾಮಾಜಿಕ ಮಾಹಿತಿ ವ್ಯವಸ್ಥೆ ಅಳವಡಿಕೆ

12:56 AM Mar 21, 2020 | Sriram |

ಮಂಗಳೂರು: ಕೋವಿಡ್‌ 19 ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶಗಳಿಂದ ಬಂದವರು ತಮ್ಮ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು. ಒಂದು ವೇಳೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಾರ್ವಜನಿಕರು, ಸ್ಥಳೀಯರು ಈ ಬಗ್ಗೆ ಮಾಹಿತಿ ಒದಗಿಸಬಹುದು. ಅದಕ್ಕಾಗಿ ಸಾಮಾಜಿಕ ಮಾಹಿತಿ ವ್ಯವಸ್ಥೆ (ಸೋಶಿಯಲ್‌ ರಿಪೋರ್ಟಿಂಗ್‌ ಸಿಸ್ಟಮ್‌) ಅಳವಡಿಸಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಕೋವಿಡ್‌ 19 ನಿಯಂತ್ರಣ ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಗರದ ಪ್ರಸ್‌ ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಶುಕ್ರವಾರ ಮಾತನಾಡಿದರು.

ಸೋಶಿಯಲ್‌ ರಿಪೋರ್ಟಿಂಗ್‌ ಸಿಸ್ಟಂನಡಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಶಾಲೆಗಳ ಶಿಕ್ಷಕರು, ಪಿಡಿಒಗಳಿದ್ದು, ಸ್ಥಳೀಯ ಜನರೂ ಪಾಲ್ಗೊಂಡು ಮಾಹಿತಿ ನೀಡಲು ಅವಕಾಶವಿದೆ. ವಿದೇಶಗಳಿಂದ ಬಂದಿರುವ ಯಾರೇ ಆದರೂ ತಮ್ಮ ಮಾಹಿತಿಯನ್ನು ಬಚ್ಚಿಟ್ಟುಕೊಳ್ಳದೆ ಆರೋಗ್ಯ ಇಲಾಖೆಗೆ ತಿಳಿಸಬೇಕು. ಅವರು ನಿರ್ಲಕ್ಷಿಸಿ ದ್ದಲ್ಲಿ ಸ್ಥಳೀಯರೇ ಮಾಹಿತಿ ಒದಗಿಸಬಹುದು. ಇಲಾಖಾಧಿಕಾರಿಗಳು ಆ ವ್ಯಕ್ತಿಯನ್ನು ಸಂಪರ್ಕಿಸಿ ನಿಗಾದಲ್ಲಿ ಇಡಲಿದ್ದಾರೆ ಎಂದರು.

ತಾಳ್ಮೆಯಿಂದ ಸಹಕರಿಸಿ
ಈಗಾಗಲೇ 1,000ಕ್ಕೂ ಹೆಚ್ಚು ಮಂದಿ ಮನೆಯಲ್ಲಿಯೇ ನಿಗಾದಲ್ಲಿದ್ದಾರೆ. ಅವರೆಲ್ಲರಿಗೂ ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ. ತಾಳ್ಮೆ ಕಳೆದುಕೊಳ್ಳದೆ, ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 14 ದಿನ ಕಾಲ ಮನೆಯಲ್ಲೇ ಇದ್ದು ಸಹಕರಿಸಬೇಕು. ತಮ್ಮ ಮತ್ತು ಸಮಾಜದ ಒಳಿತಿಗಾಗಿ ಈ ಮಾಹಿತಿ ಕೇಳಲಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಆಯುಷ್‌ನಲ್ಲಿ ಐಸೋಲೇಶನ್‌ ವಾರ್ಡ್‌
ವೆನ್ಲಾಕ್ ನಲ್ಲಿ 10 ಹಾಸಿಗೆಗಳ ಐಸೋಲೇಶನ್‌ ವಾರ್ಡ್‌ ಇದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ವೆನ್ಲಾಕ್ ಆಯುಷ್‌ ಆಸ್ಪತ್ರೆಯಲ್ಲಿ 10 ಬೆಡ್‌ಗಳ ಐಸೋಲೇಶನ್‌ ವಾರ್ಡ್‌ ತೆರೆಯಲಾಗುವುದು. ಅಗತ್ಯ ಬಿದ್ದಲ್ಲಿ ಇತರ ಕಟ್ಟಡಗಳಲ್ಲಿಯೂ ತೆರೆಯಲಾಗುವುದು ಎಂದರು.

Advertisement

ಪ್ರಯೋಗಾಲಯಕ್ಕೆ ಮನವಿ
ಜಿಲ್ಲೆಯ ಶಂಕಿತರ ಗಂಟಲಿನ ದ್ರವ ಪರೀಕ್ಷೆಗೆ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಮಂಗಳೂರಿನಲ್ಲಿ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐಸಿಎಂಆರ್‌ ಗೈಡ್‌ಲೈನ್‌ ಪ್ರಕಾರ ಲ್ಯಾಬ್‌ ನಿರ್ಮಾಣವಾಗಬೇಕಿದ್ದು, ಐಸಿಎಂಆರ್‌ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಂಸಾಹಾರ ಸೇವಿಸಬಹುದು
ಮಾಂಸಾಹಾರ ಸೇವಿಸಬಹುದು. ಆದರೆ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸಿದ ಮಾಂಸವನ್ನೇ ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ವತ್ಛತೆ ಜವಾಬ್ದಾರಿ
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌ ಮಾತನಾಡಿ, ವೈಯಕ್ತಿಕ ಸ್ವತ್ಛತೆಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಸಾರ್ವಜನಿಕ ಸ್ಥಳಗಳ ಸ್ವತ್ಛತೆಯ ಜವಾಬ್ದಾರಿಯನ್ನು ಗ್ರಾ.ಪಂ., ಸ್ಥಳೀಯಾಡಳಿತ, ಮನಪಾಗೆ ವಹಿಸಲಾಗಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್‌.ಸಿ. ಭಟ್‌ ನಿರೂಪಿಸಿದರು.

ಪಬ್‌ಗಳ ಬಗ್ಗೆ ಮಾಹಿತಿ ನೀಡಿ
ನಗರದಲ್ಲಿ ತಾತ್ಕಾಲಿಕವಾಗಿ ಎಲ್ಲ ಪಬ್‌, ಜಿಮ್‌ಗಳನ್ನು ಬಂದ್‌ ಮಾಡಲು ಸೂಚಿಸಲಾಗಿದೆ. ಆದರೂ ನಿಯಮ ಮೀರಿ ತೆರೆದಿದ್ದರೆ ಸಾರ್ವಜನಿಕರು ಮಾಹಿತಿ ನೀಡಬಹುದು ಎಂದು ಸಿಂಧೂ ರೂಪೇಶ್‌ ತಿಳಿಸಿದರು.

ಕ್ರಿಟಿಕಲ್‌ ಯುನಿಟ್‌ಗೆ ಆದೇಶ
ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ 20 ಬೆಡ್‌ಗಳಿರುವ ಪ್ರತ್ಯೇಕ ವಾರ್ಡ್‌ ಮತ್ತು ಒಂದು ಕ್ರಿಟಿಕಲ್‌ ಯುನಿಟ್‌ (ತುರ್ತು ನಿಗಾ ಘಟಕ) ಆರಂಭಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next