Advertisement

ನ್ಯಾಪ್ಕಿನ್‍ ಇನ್ಸಿನೆರೇಟರ್‌ ಅಳವಡಿಕೆಗೆ ತೊಡಕು

12:37 AM Jul 25, 2019 | Team Udayavani |

ಬೆಂಗಳೂರು: ಬಿಬಿಎಂಪಿಯ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಶುಚಿತ್ವ ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‍ ಇನ್ಸಿನೆರೇಟರ್‌ (ನ್ಯಾಪ್‌ಕಿನ್‌ ದಹನ) ಯಂತ್ರ ಅಳವಡಿಸುವ ಯೋಜನೆ ಕಗ್ಗಂಟಾಗೇ ಉಳಿದಿದೆ.

Advertisement

ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ಇನ್ಸಿನೆರೇಟರ್‌ ಯಂತ್ರ ಅಳವಡಿಸಲು ಪಾಲಿಕೆ 2019-20ನೇ ಸಾಲಿನ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನ ಮೀಸಲಿರಿಸಿತ್ತು. ಯಂತ್ರ ಅಳವಡಿಸಲು ಅನುದಾನವಿದ್ದರೂ ಅದನ್ನು ಬಳಸದೆ ದಾನಿಗಳ ನಿರೀಕ್ಷೆಯಲ್ಲಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲಿ ಖಾಸಗಿ ಕಂಪನಿಯೊಂದರ ಹಿತಾಸಕ್ತಿಯೂ ಇದೆ ಎನ್ನುವ ಆರೋಪ ವ್ಯಕ್ತವಾಗಿದೆ.

ಪಾಲಿಕೆಯ 15 ಪ್ರಾಥಮಿಕ ಶಾಲೆಗಳಲ್ಲಿ 925 ಜನ ಹೆಣ್ಣು ಮಕ್ಕಳು, 32 ಪ್ರೌಢಶಾಲೆಗಳಲ್ಲಿ 3,515 ವಿದ್ಯಾರ್ಥಿನಿಯರು, 15 ಪಿಯು ಕಾಲೇಜುಗಳಲ್ಲಿ 3045 ಹಾಗೂ ನಾಲ್ಕು ಪದವಿ ಕಾಲೇಜುಗಳಲ್ಲಿ 1021 ವಿದ್ಯಾರ್ಥಿನಿಯರಿದ್ದಾರೆ. ಈ ಶಾಲೆ, ಕಾಲೇಜುಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಈ ಯೋಜನೆ ಪರಿಚಯಿಸಲಾಗಿತ್ತು.

ಯಂತ್ರ ಅಳವಡಿಸುವುದಕ್ಕೆ ಖಾಸಗಿ ಕಂಪನಿಯೊಂದು ಮುಂದೆ ಬಂದಿತ್ತು. ಆ ಕಂಪನಿಯ ಬಗ್ಗೆ ವಿವಾದ ಉಂಟಾದ್ದರಿಂದ ಯಂತ್ರ ಖರೀದಿಸುವುದು ಬೇಡ ಎಂದು ಅಧಿಕಾರಿಗಳು ತೀರ್ಮಾನಿಸಿದ್ದರು. ಆದರೆ, ತೆರೆಯ ಹಿಂದೆ ಅದೇ ಕಂಪನಿಯಿಂದ ಯಂತ್ರಗಳನ್ನು ಖರೀದಿಸಲು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ಹಣ ಸಂಗ್ರಹಿಸಲಾಗುತ್ತಿದೆ!

ಪತ್ರ ನೀಡುವಂತೆ ಮನವಿ: ಯಂತ್ರ ಅಳವಡಿಸಲು ಮುಂದೆ ಬಂದಿದ್ದ ಖಾಸಗಿ ಕಂಪನಿ, ಪಾಲಿಕೆಯ ಹಣ ಬೇಡ. ಸಿಎಸ್‌ಆರ್‌ ಅಡಿ ಹಣ ನೀಡುತ್ತೇವೆ. ಅದಕ್ಕೆ ಪಾಲಿಕೆಯಿಂದ ಅನುಮತಿ ಪತ್ರ ನೀಡಿದರೆ ಸಾಕು ಎಂದು ಮನವಿ ಸಲ್ಲಿಸಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಅಧಿಕಾರಿಗಳ ವಾದವೇನು: ಪಾಲಿಕೆಯ ಬಹುತೇಕ ಶಾಲೆ, ಕಾಲೇಜುಗಳಲ್ಲಿ ಈಗಾಗಲೇ ಸ್ಯಾನಿಟರಿ ನ್ಯಾಪ್ಕಿನ್‍ ಇನ್ಸಿನೆರೇಟರ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಅದನ್ನು ಬದಲಾಯಿಸಬೇಕು. ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ ಯಂತ್ರ ಅಳವಡಿಸಿದರೂ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿರೋಧಕ್ಕೆ ಕಾರಣವೇನು?: “ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ಇನ್ಸಿನೆರೇಟರ್‌ ಅಳವಡಿಸಲು ಜೆಸ್ಟ್‌ವೆಂಡ್‌ ಕಾನ್‌ ಸಂಸ್ಥೆ ಮುಂದೆ ಬಂದಿತ್ತು. ಆದರೆ, ಈ ಸಂಸ್ಥೆಯ ಉತ್ಪನ್ನಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಅನ್ವಯ ತಯಾರಾಗಿಲ್ಲ’ ಎಂದು ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

“ಜೆಸ್ಟ್‌ವೆಂಡ್‌ ಕಾನ್‌ ಸಂಸ್ಥೆ ಬಾಕ್ಸ್‌ ಹೀಟರ್‌ ಇನ್ಸಿನೆರೇಟರ್‌ಗಳನ್ನು ತಯಾರಿಸುತ್ತಿದ್ದು, ಈ ಯಂತ್ರದಿಂದ ಡಯಾಕ್ಸಿನ್‌, ಕಾರ್ಬನ್‌ ಮೋನಾಕ್ಸೈಡ್‌, ನೈಟ್ರೋಜನ್‌ ಮತ್ತು ಸಲ್ಫರ್‌ ಡಯಾಕ್ಸೈಡ್‌ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ. ಬಡ ಮಕ್ಕಳ ಶುಚಿತ್ವ ಕಾಪಾಡುವ ಯೋಜನೆ ಅವರಿಗೆ ಮಾರಕವಾಗಬಾರದು. ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನುಸರಿಸುವ ಕಂಪನಿಯಿಂದ ಮಾತ್ರ ಯಂತ್ರ ಖರೀದಿಸಲಿ’ ಎಂದು ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next