ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರವನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ಯಬೇಕೆನ್ನುವ ಗುರಿಯೊಂದಿಗೆ ರಾಜಕಾರಣ ಮಾಡಿದರೇ ಹೊರತು ಅಧಿಕಾರಕ್ಕಾಗಿ ಅಥವಾ ಇನ್ನಾರನ್ನೋ ತುಳಿಯಲಿಕ್ಕಾಗಿ ಅಲ್ಲ. ಹೀಗಾಗಿಯೇ ಅವರೊಬ್ಬ ರಾಜಋಷಿ ಹಾಗೂ ಮುತ್ಸದ್ಧಿ ಎಂದರೆ ಯಾರ ವಿರೋಧ ವ್ಯಕ್ತವಾಗಲಿಕ್ಕಿಲ್ಲ ಎಂದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಅಜಾತಶತ್ರು ಅಟಲ್‌ಜೀ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಉತ್ತಮ ಕಾರ್ಯವನ್ನು ಬಹಿರಂಗವಾಗಿ ಶ್ಲಾಘಿಸಿದ್ದು ವಾಜಪೇಯಿಯವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ವಾಜಪೇಯಿ ಅವರು ಮಾಡಿದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರಾಜಕೀಯ ಪದದ ಅರ್ಥ ವ್ಯಂಗ್ಯವಾಗಿ ಮಾರ್ಪಟ್ಟಿದೆ. ಅಧಿಕಾರಕ್ಕಾಗಿ ರಾಜಕಾರಣ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಬೆಳೆದು ಬಿಟ್ಟಿದೆ. ವಾಜಪೇಯಿ ಅವರಂತಹ ಮಹಾನ್ ನಾಯಕರ ರಾಜಕೀಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು, ರಾಜಧರ್ಮ ಅನುಸರಿಸಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ವಾಜಪೇಯಿ ಅವರ ಸಮಯಪ್ರಜ್ಞೆ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನ್ನನ್ನು ಸಾಕಷ್ಟು ಆಕರ್ಷಿಸಿವೆ. ಅವರು ಒಂದೇ ಒಂದು ಆರೋಪವಿರದ ಸಜ್ಜನ ರಾಜಕಾರಣಿ ಎಂದರು.
ಶಾಸಕ ಜಗದೀಶ ಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಎರಡು ಪಕ್ಷಗಳ ನಡುವಿನ ಮೈತ್ರಿ ಸರಕಾರ ನಿತ್ಯ ಗೊಂದಲಗಳಿಂದ ಕೂಡಿದೆ. ಆದರೆ ವಾಜಪೇಯಿ ಅವರು ವಿಭಿನ್ನ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ 23 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಯಶಸ್ವಿಯಾಗಿ ಆಡಳಿತ ನಡೆಸಿದರು. ಇತರರ ಕಾರ್ಯ ಸಾಧನೆಯನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿದ್ದರು ಎಂದರು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಪ್ರದೀಪ ಶೆಟ್ಟರ, ಪದ್ಮಶ್ರೀ ಪುರಸ್ಕೃತ ಡಾ| ಎಂ.ಎಂ. ಜೋಶಿ, ಜಿ.ಎಂ. ಚಿಕ್ಕಮಠ ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಹಾಪೌರ ಸುಧೀರ ಸರಾಫ, ಉಪ ಮಹಾಪೌರ ಮೇನಕಾ ಹುರಳಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಂತಣ್ಣ ಕಡಿವಾಳ, ಬಾಲಚಂದ್ರ ನಾಕೋಡ ಇದ್ದರು.
ವಾಜಪೇಯಿ ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರು. ಎಲ್ಲಾ ಪಕ್ಷದವರನ್ನು ಗೌರವದಿಂದ ಕಾಣುವ ವ್ಯಕ್ತಿತ್ವವೇ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿದೆ. ಇಂದಿರಾ ಗಾಂಧಿ ಅವರನ್ನು ದುರ್ಗಾ ದೇವಿಗೆ ಹೋಲಿಸಿದ ಗೌರವ ಗುಣ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಇಂದು ಸಣ್ಣದರಲ್ಲೂ ಕೆಸರೆರಚಾಟ ನಡೆಯುತ್ತಿದೆ. ಇಂದಿರಾ ಗಾಂಧಿ ಹಾಗೂ ವಾಜಪೇಯಿ ಅವರ ಭಾಷಣ ಕೇಳಿ ಬೆಳೆದವನು ನಾನು.
ಸಿ.ಎಸ್. ಶಿವಳ್ಳಿ, ಕಾಂಗ್ರೆಸ್ ಶಾಸಕ