Advertisement

ಇನ್ನು ವಿವಿಗಳಲ್ಲಿ ವರ್ಷಕ್ಕೆ2 ಬಾರಿ ಪ್ರವೇಶ ಪ್ರಕ್ರಿಯೆ!

10:01 PM Jun 11, 2024 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ವಿದೇಶಿ ವಿ.ವಿ.ಗಳ ಮಾದರಿಯಲ್ಲೇ ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ 2 ಬಾರಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಇಂಥದ್ದೊಂದು ಪ್ರಸ್ತಾವಕ್ಕೆ ವಿ.ವಿ.ಗಳ ಧನಸಹಾಯ ಆಯೋಗ (ಯುಜಿಸಿ) ಅನುಮತಿ ನೀಡಿದೆ.

Advertisement

ಅದರಂತೆ 2024-25ರ ಶೈಕ್ಷಣಿಕ ವರ್ಷದಿಂದ 2 ಬಾರಿ ಅಂದರೆ ಜುಲೈ-ಆಗಸ್ಟ್‌ನಲ್ಲಿ ಮತ್ತು ಜನವರಿ-ಫೆಬ್ರವರಿಯಲ್ಲಿ ವಿ.ವಿ.ಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

ಬೋರ್ಡ್‌ ಫ‌ಲಿತಾಂಶಗಳು, ಆರೋಗ್ಯ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಜುಲೈ-ಆಗಸ್ಟ್‌ ಅವಧಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದೆ ಇರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಯುಜಿಸಿ ಮುಖ್ಯಸ್ಥ ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ಇನ್ನು ಮುಂದೆ ಒಂದು ಹಂತದ ಪ್ರವೇಶ ಪ್ರಕ್ರಿಯೆಯನ್ನು ತಪ್ಪಿಸಿಕೊಂಡವರು ವಿ.ವಿ.ಗಳಿಗೆ ಪ್ರವೇಶ ಪಡೆಯಲು ಒಂದಿಡೀ ವರ್ಷ ಕಾಯಬೇಕಾಗಿರುವುದಿಲ್ಲ. ಅಲ್ಲದೆ ವಿವಿಧ ಉದ್ಯಮ ಸಂಸ್ಥೆಗಳು ಕೂಡ ವರ್ಷಕ್ಕೆ 2 ಬಾರಿ ಕ್ಯಾಂಪಸ್‌ ಸಂದರ್ಶನ ಮಾಡಿ, ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಗಳ ಹಲವು ವಿ.ವಿ.ಗಳು ವರ್ಷಕ್ಕೆರಡು ಬಾರಿ ಪ್ರವೇಶ ಪ್ರಕ್ರಿಯೆ ಮಾದರಿಯನ್ನು ಅನುಸರಿಸುತ್ತಿವೆ. ಭಾರತದಲ್ಲೂ ಅದೇ ಮಾದರಿ ಅನುಸರಿಸಿದರೆ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಾರಾಷ್ಟ್ರೀಯ ವಿ.ವಿ.ಗಳೊಂದಿಗೆ ಸಹಭಾಗಿತ್ವ ಸಾಧಿಸಲು ಮತ್ತು ವಿದ್ಯಾರ್ಥಿ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದಿದ್ದಾರೆ.

ಕಡ್ಡಾಯ ಅಲ್ಲ

Advertisement

ವರ್ಷಕ್ಕೆ 2 ಬಾರಿ ಪ್ರವೇಶ ಪ್ರಕ್ರಿಯೆ ನಡೆಸುವುದು ಕಡ್ಡಾಯವಲ್ಲ. ಬೋಧಕ ಸಿಬಂದಿ ಸಹಿತ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದೂ ಯುಜಿಸಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next