Advertisement

ಸಾಲಿಗ್ರಾಮ ಪ.ಪಂ. ಆಡಳಿತ ವ್ಯವಸ್ಥೆ  ಸ್ತಬ್ಧ; ಸಮಸ್ಯೆ ಕೇಳುವವರಿಲ್ಲ

02:35 AM Oct 30, 2018 | Team Udayavani |

ಕೋಟ: ಸಿಬಂದಿ ಕೊರತೆ, ಸೇವೆಯಲ್ಲಿರುವವರ ದೀರ್ಘ‌ ರಜೆ, ಆಯ್ಕೆಯಾದ ಸದಸ್ಯರಿಗೆ ಅಧಿಕಾರವಿಲ್ಲದಿರುವುದು ಈ ಎಲ್ಲಾ ಸಮಸ್ಯೆಯಿಂದಾಗಿ ಸಾಲಿಗ್ರಾಮ ಪ.ಪಂ. ಆಡಳಿತ ವ್ಯವಸ್ಥೆ ಸುಮಾರು 2ತಿಂಗಳಿಂದ ಸಂಪೂರ್ಣ ಸ್ತಬ್ಧಗೊಂಡಿದೆ. ಕಟ್ಟಡ ಪರವಾನಿಗೆ, ತೆರಿಗೆ ನಿರ್ಧಾರ, ಮನೆ ಪರವಾನಿಗೆ, ಬೀದಿ ದೀಪದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತಾರು  ಕೆಲಸಗಳಿಗೆ ಅರ್ಜಿ ಸಲ್ಲಿಸಿದವರು ಕೆಲಸವಾಗದೆ ತಿಂಗಳುಗಟ್ಟಲೆಯಿಂದ ಕಾಯುತ್ತಿದ್ದಾರೆ.

Advertisement

ದೀರ್ಘ‌ ರಜೆ; ಆಡಳಿತಾಧಿಕಾರಿಗಳ ಭೇಟಿ ಇಲ್ಲ
ಪ.ಪಂ.ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಜಿನಿಯರ್‌ ಆರೋಗ್ಯದ ಸಮಸ್ಯೆ ಹೇಳಿ  ಒಂದು ತಿಂಗಳಿಂದ ರಜೆಯಲ್ಲಿದ್ದಾರೆ ಹಾಗೂ ಅನಧಿಕೃತವಾಗಿ ರಜೆಯಲ್ಲಿ ತೆರಳಿರುವ ಕಾರಣಕ್ಕೆ ಇವರಿಗೆ ನೋಟೀಸ್‌ ನೀಡಲಾಗಿದೆ.  ಅದೇ ರೀತಿ ಆರ್‌.ಒ. ಕೂಡ ಆರೋಗ್ಯದ ಕಾರಣಕ್ಕಾಗಿ 15 ದಿನಗಳಿಂದ ರಜೆಯಲ್ಲಿದ್ದಾರೆ. ಅಧ್ಯಕ್ಷರ ನೇಮಕವಾಗದಿರುವುದರಿಂದ ಆಡಳಿತಾಧಿಕಾರಿಗಳ ಆಡಳಿತವಿದ್ದು, ಈ ಮೊದಲು ಬ್ರಹ್ಮಾವರ ತಹಶೀಲ್ದಾರ್‌ ಆಡಳಿತಾಧಿಕಾರಿಯಾಗಿದ್ದರು. ಆದರೆ ಅವರು ಒಂದೂವರೇ ತಿಂಗಳಲ್ಲಿ ಕೇವಲ ಎರಡು-ಮೂರು ಬಾರಿ ಪ.ಪಂ.ಗೆ ಭೇಟಿ ನೀಡಿದ್ದಾರೆ. ಇದೀಗ ಅವರು ವರ್ಗಾವಣೆಗೊಂಡಿದ್ದು, ಉಡುಪಿ ತಹಶೀಲ್ದಾರ್‌ ಅಧಿಕಾರ ವಹಿಸಿಕೊಂಡಿದ್ದಾರೆ. ಇವರಿಗೂ ಕೂಡ ಕಂದಾಯ ಇಲಾಖೆಯಲ್ಲಿನ ಕಾರ್ಯದೊತ್ತಡ, ಮೂರು ತಾಲೂಕುಗಳ ದೊಡ್ಡ ಹೊಣೆಗಾರಿಕೆ ಇರುವುದರಿಂದ ಪ.ಪಂ.ಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಕಡತಗಳಿದ್ದರೆ ಮುಖ್ಯಾಧಿಕಾರಿಗಳೇ ಇವರ ಬಳಿ ತೆರಳಿ ಸಹಿ ಹಾಕಿಸಿಕೊಂಡು ಬರುತ್ತಾರೆ.

ಖಾಯಂ ಅಧಿಕಾರಿಗಳಿಲ್ಲ
ಇಲ್ಲಿನ ಇಂಜಿನಿಯರ್‌ ಹಾಗೂ ಆರ್‌.ಒ. ಹುದ್ದೆಗೆ ಖಾಯಂ ಅಧಿಕಾರಿಗಳಿಲ್ಲ. ಹೀಗಾಗಿ ಬೇರೆ ಕಡೆಯ ಹೆಚ್ಚುವರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ನಿರೀಕ್ಷಕರು ಕೂಡ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಬಿಲ್‌ ಕಲೆಕ್ಟರ್‌, ಪ್ರಥಮದರ್ಜೆ ಸಹಾಯಕ ಅಧಿಕಾರಿ ಹೀಗೆ ಹಲವು ಹುದ್ದೆಗಳು ಖಾಲಿ ಇವೆೆ. ಇದರ ಜತೆಗೆ ಇದೀಗ ಅಧಿಕಾರಿಗಳ ಸಾಲು-ಸಾಲು ರಜೆ ಗಾಯದ ಮೇರೆ ಬರೆ ಎಳೆದಂತಾಗಿದೆ.

ಹೊಸ ಸದಸ್ಯರ ಮಾತು ನಡೆಯುತ್ತಿಲ್ಲ
ಅಧ್ಯಕ್ಷರ ಆಯ್ಕೆಯಾಗದಿರುವುದರಿಂದ ಹೊಸ ಸದಸ್ಯರಿಗೆ ಇನ್ನೂ ಕೂಡ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ನಮ್ಮ  ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜನರು ಪ್ರತಿದಿನ ಸಮಸ್ಯೆಗಳೊಂದಿಗೆ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ಸದಸ್ಯರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಸಾಲು-ಸಾಲು ಸಮಸ್ಯೆ; ಕೆಲಸವಾಗುತ್ತಿಲ್ಲ
ಆಡಳಿತದಲ್ಲಿ ಮಹತ್ವದ ಹೊಣೆಗಾರಿಕೆ ಹೊಂದಿರುವ ಇಂಜಿನಿಯರ್‌ ಒಂದು ತಿಂಗಳಿಂದ ರಜೆಯಲ್ಲಿರುವುದರಿಂದ ಕಟ್ಟಡ ಪರವಾನಿಗೆಯ 35ಕ್ಕೂ ಹೆಚ್ಚು ಕಡತ ಹಾಗೂ ತೆರಿಗೆ ನಿರ್ಧಾರಕ್ಕಾಗಿ ಸಲ್ಲಿಕೆಯಾದ 30ಕ್ಕೂ ಹೆಚ್ಚು ಕಡತ ಬಾಕಿ ಇದೆ. ಗುತ್ತಿಗೆದಾರರ 7ಕ್ಕೂ ಹೆಚ್ಚು ಬಿಲ್‌ ಬಾಕಿ ಇದೆ.

Advertisement

ಎಸ್‌.ಎಫ್‌.ಸಿ. ಅನುದಾನದಲ್ಲಿ ಅನುಷ್ಠಾನಗೊಳ್ಳಬೇಕಾಗಿರುವ 86ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಾಧ್ಯವಾಗುತ್ತಿಲ್ಲ. ಹೊಸ ಮನೆಗಳಿಗೆ ಡೋರ್‌ ನಂಬರ್‌, ವಸತಿ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲೂ ಬೀದಿ ದೀಪದ ಸಮಸ್ಯೆ ದೊಡ್ಡದಾಗಿದೆ. ಆನ್‌ಲೈನ್‌ ಮೂಲಕ ನೀಡಿದ ದೂರುಗಳಿಗೂ 18-20ದಿನ ಪರಿಹಾರ ಸಿಗುತ್ತಿಲ್ಲ. ಕಸದ ಸಮಸ್ಯೆ ಕಿತ್ತು ತಿನ್ನುವಂತಿದೆ.

ಎಂಜಿನಿಯರ್‌ಗೆ ಶೋಕಾಸ್‌ ನೊಟೀಸ್‌
ಅಧಿಕಾರಿಗಳು ದೀರ್ಘ‌ ರಜೆಯಲ್ಲಿರುವುದರಿಂದ ಕೆಲವು ಪ್ರಮುಖ ಕೆಲಸಗಳು ಆಗುತ್ತಿಲ್ಲ ನಿಜ. ಸಮಸ್ಯೆಯನ್ನು ಈಗಾಗಲೇ ಉನ್ನತ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳಿಗೆ ತಿಳಿಸಿದ್ದೇನೆ. ಸಮಸ್ಯೆ ಶೀಘ್ರ ಪರಿಹರಿಸುವ ಭರವಸೆ ನೀಡಿದ್ದಾರೆ. ಎಂಜಿನಿಯರ್‌ ಅನಧಿಕೃತವಾಗಿ ಗೈರಾದ ಕಾರಣಕ್ಕೆ ಶೋಕಾಸ್‌ ನೋಟೀಸ್‌  ನೀಡಿದ್ದೇನೆ.
– ಶ್ರೀಪಾದ್‌ ಪುರೋಹಿತ್‌, ಸಿ.ಒ.  ಪ.ಪಂ.

ಜನರ ಕೆಲಸ ಆಗುತ್ತಿಲ್ಲ
ಪ.ಪಂ.ನಲ್ಲಿ ಕೆಲವು ಸಿಬಂದಿ  ದೀರ್ಘ‌ ರಜೆಯಲ್ಲಿದ್ದಾರೆ. ಹೀಗಾಗಿ ಕಟ್ಟಡ ಪರವಾನಿಗೆ, ಬೀದಿ ದೀಪದ ಸಮಸ್ಯೆ, ತೆರಿಗೆ ಸಂಬಂಧಿಸಿದ ಯಾವುದೇ ಕೆಲಸವಾಗುತ್ತಿಲ್ಲ. ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲವಾಗಿದೆ.
– ಸಂಜೀವ ದೇವಾಡಿಗ, ಸದಸ್ಯರು ಪ.ಪಂ.

ಸಮಸ್ಯೆ ಬಗೆಹರಿಸಲು ಯತ್ನ
ಸಾಲಿಗ್ರಾಮ ಪ.ಪಂ.ನ ಸಮಸ್ಯೆಗಳ ಬಗ್ಗೆ ಅರಿವಿದೆ. ಎಂಜಿನಿಯರ್‌ ರಜೆಯಲ್ಲಿದ್ದಾರೆ. ಅವರು ಕರ್ತವ್ಯ ನಿರ್ವಹಿಸಲು ನಿರಾಕರಿಸಿದಲ್ಲಿ ಬೇರೆಯವರನ್ನು ನೇಮಕ ಮಾಡಲಾಗುವುದು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು.
– ಅರುಣಪ್ರಭಾ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿಕೋಶ

— ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next