Advertisement

ಆಸರೆ ಕ್ಯಾಂಪ್‌ಗೆ ತೆರಳಲು ಗ್ರಾಮಸ್ಥರಿಗೆ ಆಡಳಿತದ ಸೂಚನೆ

11:42 AM Aug 16, 2018 | Team Udayavani |

ಹರಪನಹಳ್ಳಿ: ತುಂಗಭದ್ರಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗಿರುವ ಪರಿಣಾಮ ತಾಲೂಕಿನ ನದಿ ಪಾತ್ರದ ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದ್ದು, 3 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

Advertisement

ಹಲುವಾಗಲು ಮತ್ತು ಗರ್ಭಗುಡಿ ಗ್ರಾಮಗಳ ಸಂಪರ್ಕ ರಸ್ತೆ ಜಾಲಾವೃತಗೊಂಡು ಸಂಪರ್ಕ ಕಡಿತಗೊಂಡಿರುವುದರಿಂದ ಕುಂಚೂರು ಮಾರ್ಗವಾಗಿ ತೆರಳಬೇಕಾಗಿದೆ. ಹಲುವಾಗಲು ಗ್ರಾಮದಿಂದ ಕಣವಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗರ್ಭಗುಡಿ ಗ್ರಾಮದಲ್ಲಿನ ನದಿ ಪಾತ್ರದ 3 ವಾಸದ ಮನೆಗಳು ಜಲಾವೃತಗೊಂಡಿದ್ದು, ಸಿದ್ದಾಪುರ, ಗರ್ಭಗುಡಿ ಮತ್ತು ಹಲುವಾಗಲು ಗ್ರಾಮಗಳಿಗೆ ಕುಟುಂಬಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಈ ಮೂರು ಕುಟಂಬಗಳು ಹೊಲದ ಸಮೀಪ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು ಎನ್ನಲಾಗಿದೆ.

ಹಲುವಾಗಲು ಗ್ರಾಮದಲ್ಲಿ ಜಲಾವೃತಗೊಳ್ಳುವ ಮನೆಗಳಿಗೆ ಪರ್ಯಾಯವಾಗಿ ಈ ಹಿಂದೆ ಆಸರೆ ಕ್ಯಾಂಪ್‌ನಲ್ಲಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಿದ್ದರೂ ಕೂಡ ನದಿ ಪಾತ್ರದ ಮನೆಗಳಲ್ಲಿಯೇ ವಾಸವಾಗಿದ್ದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಸರೆ ಕ್ಯಾಂಪ್‌ಗೆ ತೆರಳುವಂತೆ ಉಪವಿಭಾಗಾಧಿಕಾರಿ ಜಿ.ನಜ್ಮಾ ಸೂಚನೆ ನೀಡಿದ್ದಾರೆ. ಗರ್ಭಗುಡಿ ಗ್ರಾಮದಲ್ಲಿ ಈ ಹಿಂದೆ 130 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಪಟ್ಟಾ ವಿತರಿಸಲಾಗಿದೆ. ಅವರಿಗೂ ಕೂಡ ಆಸರೆ ಮನೆಗಳಿಗೆ ತೆರಳುವಂತೆ ಹಾಗೂ ಜಾನುವಾರುಗಳ ಮೇವನ್ನು ಬೇರೆಡೆಗೆ ಸ್ಥಳಾಂತರ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಹಲುವಾಗಲು ಭಾಗದಲ್ಲಿ 250 ಎಕರೆ ಭತ್ತ, 20 ಎಕರೆ ಚಂಡ ಹೂ, 150 ಎಕರೆ ಮೆಕ್ಕೆಜೋಳ ಬೆಳೆಗೆ ನೀರು ನುಗ್ಗಿ ಮುಳುಗಡೆಯಾಗಿದೆ. ತಾವರಗೊಂದಿ, ಬಸಾಪುರ, ನಿಟ್ಟೂರು, ಕಡತಿ, ನಂದ್ಯಾಲ ಗ್ರಾಮಗಳ ಭಾಗದ ಸುಮಾರು 2500 ಎಕರೆ ವಿವಿಧ ಬೆಳೆ ಜಲಾವೃತವಾಗಿದೆ. 2-3 ದಿನ ಕಾಲ ನೀರು ನಿರಂತರವಾಗಿ ನಿಂತಲ್ಲಿ ಬೆಳೆಗಳಿಗೆ ಹಾನಿ ಆಗುವ ಸಂಭವವಿದೆ. 

ನಿರಂತರವಾಗಿ ನೀರು ಹರಿದು ಬಂದಲ್ಲಿ ಹಲುವಾಗಲು ಗ್ರಾಮ ಲೆಕ್ಕಾಧಿಕಾರಿಗಳ ವಸತಿ ಗೃಹ ಮತ್ತು ಹಲುವಾಗಲು ಗ್ರಾ.ಪಂ ಕಟ್ಟಡ ಮುಳುಗಡೆಯಾಗುವ ಸಾಧ್ಯತೆಯಿದೆ. ಹಲುವಾಗಲು ಬಿಸಿಎಂ ವಸತಿ ನಿಲಯದಲ್ಲಿ ಗಂಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಉಪವಿಭಾಗಾಧಿಕಾರಿ ಜಿ.ನಜ್ಮಾ, ತಹಶೀಲ್ದಾರ್‌ ಕೆ.ಗುರುಬಸವರಾಜ್‌, ಇಒ ಆರ್‌.ತಿಪ್ಪೇಸ್ವಾಮಿ ನೆರೆ ಹಾವಳಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತೆಲಿಗಿ ನಾಡ ಕಚೇರಿ ಉಪ ತಹಶೀಲ್ದಾರ್‌ ಎಂ.ಎನ್‌.ಮಂಜುಳ, ಕಂದಾಯ ನಿರೀಕ್ಷಕ ಡಿ.ರಾಜಪ್ಪ, ಹಲುವಾಗಲು ಗ್ರಾಮ ಲೆಕ್ಕಾಧಿಕಾರಿ ಎಚ್‌.ಮಲ್ಲಿಕಾರ್ಜುನ್‌, ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿ ಶ್ರೀಕಾಂತ್‌, ಪಿಡಿಒ ಶಿವಣ್ಣ, ಹಲುವಾಗಲು, ಕುಂಚೂರು, ನಿಟ್ಟೂರು ಗ್ರಾಮ ಸಹಾಯಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.