ಅಫಜಲಪುರ: ಸೊನ್ನಲಿಗೆ ಸಿದ್ದರಾಮ ಶರಣರು ತಮ್ಮ ಸರಳ ಜೀವನ, ಉದಾತ್ತ ಜೀವನ ಮೌಲ್ಯ ಹೊಂದಿದ್ದರು. ಅವರು ರಚಿಸಿದ ವಚನಗಳು ನಮ್ಮ ಮನ ಪರಿವರ್ತನೆ ಮಾಡುತ್ತವೆ. ಹಾಗಾಗಿ ಅವರ ಆದರ್ಶಗಳನ್ನು ನಮ್ಮ
ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಿದ್ದರಾಮ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
12ನೇ ಶತಮಾನದಲ್ಲಿ ಸೊನ್ನಲಿಗೆ ಸಿದ್ದರಾಮರು ಕೆರೆ ಕಟ್ಟೆ ಕಟ್ಟಿಸಿ ನೀರಿನ ದಾಹ ತಣಿಸಿದ್ದರು. ಅವರ ಜನೋಪಕಾರಿ ಕೆಲಸಗಳು ಇಂದಿಗೂ ಮಾದರಿಯಾಗಿವೆ. ಅವರಂತೆ ಇಂದಿನ ಜನನಾಯಕರು ಅನುಸರಿಸಬೇಕು. ನದಿಗಳು, ಹಳ್ಳ ಕೊಳ್ಳಗಳಿಗೆ ಡ್ಯಾಂ ಕಟ್ಟಿಸಬೇಕು. ಹಳ್ಳಿಗಳಲ್ಲಿ ಕೆರೆ ಕಟ್ಟಿಸಿ ಜನರ ಮತ್ತು ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ತಹಶೀಲ್ದಾರ ಇಸ್ಮಾಯಿಲ್ ಮುಲ್ಕಿ, ಭೋವಿ ವಡ್ಡರ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಲಸ್ಕರ ಮಾತನಾಡಿದರು.
ಪುರಸಭೆ ಸದಸ್ಯರಾದ ಹಣಮಂತ ವಡ್ಡರ, ನಾಗಪ್ಪ ಆರೇಕರ, ಮುಖಂಡರಾದ ಕಲ್ಯಾಣಿ ಜಾಧವ, ರಾಮಣ್ಣ ವಡ್ಡರ, ರಾಜು ಲಸ್ಕರ್, ಗೋಪಾಲ ನಿಂಬಾಳಕರ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಸಿಡಿಪಿಒ ಸರಳಾ ದೊಡ್ಮನಿ ಇದ್ದರು.